ಬೀದರ್: ಸರ್ಕಾರಿ ಶಾಲೆಯಲ್ಲಿ ಕಲಿತವರು ದೊಡ್ಡ ಹುದ್ದೆ ಅಲಂಕರಿಸುತ್ತಾರೆ ಅಂತಾ ಹೆಳ್ತಾರೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೋರ್ವರು ಪಾಠದ ಬದಲಾಗಿ ಮಕ್ಕಳಿಗೆ ಗೋಡೆ ಕಟ್ಟುವ ಮೇಸ್ತ್ರಿ ಕೆಲಸ ಕಲಿಸುತ್ತಿದ್ದು ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಂಡ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂದಬಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಮುಖ್ಯ ಶಿಕ್ಷಕಿ ಶಾಲೆಯ ಕಾಂಪೌಂಡ್ ಗೋಡೆ ಕಟ್ಟಲು ಮಕ್ಕಳನ್ನು ಕಾರ್ಮಿಕರಂತೆ ಬಳಸಿಕೊಂಡಿದ್ದಾರೆ. ಮರಳು, ಸಿಮೆಂಟ್ ಹಾಗೂ ಕಲ್ಲುಗಳನ್ನು ಜೋಡಿಸುತ್ತಾ ವಿದ್ಯಾರ್ಥಿಗಳು ಕಾಂಪೌಂಡ್ ಗೋಡೆ ಕಟ್ಟುತ್ತಿದ್ದು, ಖುದ್ದು ಶಿಕ್ಷಕಿಯೇ ಎದುರು ನಿಂತು ಮಾರ್ಗದರ್ಶನ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು ಎಂದು ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತಂದರೂ ಇಂತಹ ಘಟನೆಗಳು ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿ.