ಬಸವಕಲ್ಯಾಣ(ಬೀದರ್):ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇಲ್ಲಿಯ ಸಸ್ತಾಪುರ ಬಂಗ್ಲಾ ಬಳಿಯ ಕೈಗಾರಿಕೆ ಪ್ರದೇಶ ಸಮೀಪದ ಬೊಕ್ಕೆ ಲೇಔಟ್ನಲ್ಲಿ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ ವಿಧಾನಗಳನುಸಾರ ಕೊರೊನಾ ನಿಯಮಗಳನ್ನನುಸರಿಸಿ ಅಗಲಿದ ಶಾಸಕರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಅಂತ್ಯಕ್ರಿಯೆ ವೇಳೆ ಕನಿಷ್ಠ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಗಲಿದ ಶಾಸಕರಿಗೆ ಗೌರವ, ಅಂತಿಮ ನಮನ ಸಲ್ಲಿಸಲಾಯಿತು.
ಹಾರಕೂಡನ ಡಾ.ಚನ್ನವೀರ ಶಿವಾಚಾರ್ಯರು, ಭಾಲ್ಕಿಯ ಗುರುಬಸವ ಪಟ್ಟದೇವರು, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಬೀದರ್ ಸಂಸದ ಭಗವಂತ್ ಖೂಬಾ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರುಗಳಾದ ರಾಜಶೇಖರ್ ಪಾಟೀಲ ಹುಮನಾಬಾದ, ಬಂಡೆಪ್ಪ ಕಾಶೆಂಪೂರ, ಯುಟಿ ಖಾದರ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ್ ಪಾಟೀಲ, ಕುಪ್ಪಣ್ಣ ಕಮಕನೂರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಎಸ್ಪಿ ಡಿ.ಎಲ್, ನಾಗೇಶ ಸೇರಿದಂತೆ ಹಿರಿಯ ರಾಜಕೀಯ ಧುರೀಣರು, ಅಧಿಕಾರಿಗಳು, ಶಾಸಕರ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.