ಬಸವಕಲ್ಯಾಣ (ಬೀದರ್ ): ಯುವತಿಯೊಂದಿಗಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆ ಪ್ರಿಯಕರನ ಕೊಲೆ ನಡೆಸಿರುವ ಘಟನೆ ತಾಲೂಕಿನ ಪ್ರೇಮಸಿಂಗ್ ಬಂಜಾರಾ ತಾಂಡಾದಲ್ಲಿ ನಡೆದಿದೆ. ಇಲ್ಲಿನ ತಾಂಡಾದ ನಿವಾಸಿ ಮಾರುತಿ ಖೂಬಾ ಚಿನ್ನಿರಾಥೋಡ್ (21) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.
ತಾಂಡಾದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಮಾರುತಿಗೆ ಕೆಲವು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ಹೀಗಾಗಿ ಈತನಿಂದ ದೂರವಾದ ಯುವತಿ ಹಿರನಾಗಾಂವ ಗ್ರಾಮದ ಸುಭಾಷ್ ನಾಗೂರೆ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಾಳೆ ಎನ್ನಲಾಗಿದೆ. ಆದರೆ, ಮದುವೆ ನಂತರ ಕೆಲ ದಿನಗಳ ಕಾಲ ದೂರವಾಗಿದ್ದ ಹಳೆ ಪ್ರೇಮಿ ಮಾರುತಿ ಮತ್ತೆ ಈ ಯುವತಿಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಇದನ್ನು ಕಂಡ ಸುಭಾಷ್ ಹಾಗೂ ಯುವತಿಯ ಕುಟುಂಬದ 5 ಜನ ಸದಸ್ಯರು ಸೇರಿಕೊಂಡು ಬುಧವಾರ ಸಂಜೆ ಯುವತಿ ಮನೆಗೆ ಆಗಮಿಸಿದ ಮಾರುತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.