ಬೀದರ್:ವ್ಯಕ್ತಿಯೋರ್ವನ ಉನ್ನತೀಕರಣದಲ್ಲಿ ಶಿಕ್ಷಕರು ಹಾಗೂ ವಿದ್ಯಾಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಅಂತಹ ಅದ್ಭುತ ಸ್ಪಂದನೆ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ದೊರೆತಿದ್ದರಿಂದಲೇ ನಾನು ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯವಾಯಿತು ಎಂದು ತೆಲಂಗಾಣದ ಲೋಕೋಪಯೋಗಿ ಮತ್ತು ವಸತಿ ಇಲಾಖೆ ಸಚಿವ ಪ್ರಶಾಂತ ರೆಡ್ಡಿ ಹೇಳಿದರು.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂಸ್ಥೆಯಲ್ಲಿ ಕಲಿತ ಶೇ. 90ರಷ್ಟು ವಿದ್ಯಾರ್ಥಿಗಳು ದೇಶ ಸೇರಿದಂತೆ ವಿದೇಶಗಳಲ್ಲಿಯೂ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಂಡ್ರೆ ಮನೆತನ ಇರದಿದ್ದರೆ ಈ ಸಂಸ್ಥೆಯೂ ಇರುತ್ತಿರಲಿಲ್ಲ, ಭಾಲ್ಕಿ ಕ್ಷೇತ್ರವೂ ಅಭಿವೃದ್ಧಿ ಆಗುತ್ತಿರಲಿಲ್ಲ. ಕ್ಷೇತ್ರಕ್ಕೆ ಭೀಮಣ್ಣ ಖಂಡ್ರೆಯವರ ಕೊಡುಗೆ ಅಪಾರ ಎಂದರು.