ಬಸವಕಲ್ಯಾಣ :ಶಿಕ್ಷಕಿಯೊಬ್ಬರು ವಠಾರ ಶಾಲೆಯ ತರಗತಿಗೆ ಬಂದ ವಿದ್ಯಾರ್ಥಿಗಳನ್ನು ತನ್ನ ಜಮೀನಿನಲ್ಲಿರುವ ಕೃಷಿ ಚಟುವಟಿಕೆಗೆ ಬಳಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರ ಪಟ್ಟಣದ ಸಂತ ರಘುನಾಥ ಮಹಾರಾಜ ಪ್ರೌಢಶಾಲೆಯ ಸಹ ಶಿಕ್ಷಕಿ ಮೋಹನಬಾಯಿ ಝಕಾಡೆ ಎನ್ನುವವರು ಕಳೆದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಶಾಲೆಯ ಮಕ್ಕಳನ್ನು ತಮ್ಮ ಜಮೀನಿನಲ್ಲಿನ ಸೋಯಾ, ಅವರೆ ಬೆಳೆ ಕಟಾವು ಮಾಡಲು ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಶಾಲೆಗೆ ಬಂದ ವಿದ್ಯಾರ್ಥಿಗಳನ್ನ ಸೋಯಾ ಬೆಳೆ ತೆಗೆಯಲು ಬಳಸಿಕೊಂಡ ಶಿಕ್ಷಕಿ ಅನುದಾನಿತ ಖಾಸಗಿ ಶಾಲೆ ಶಿಕ್ಷಕಿಯಾಗಿರುವ ಇವರು ಪಟ್ಟಣದ ಸಮೀಪ ಸ್ವಂತ ಜಮೀನು ಹೊಂದಿದ್ದಾರೆ. ವಠಾರ ಶಾಲೆಗೆಂದು ಆಗಮಿಸಿದ ಎಸ್ಎಸ್ಎಲ್ಸಿ ಹಾಗೂ ಇತರ ತರಗತಿಗಳ ವಿದ್ಯಾರ್ಥಿಗಳಿಗೆ ಕೂಲಿ ಹಣದ ಅಮಿಷವೊಡ್ಡಿ ತಮ್ಮ ಜಮೀನಿನ ಸೋಯಾ ಬೆಳೆ ಕಟಾವು ಮಾಡಲು ಬಳಸಿಕೊಂಡಿದ್ದಾರೆ. ತರಗತಿಗೆ ಬಂದ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಹೊತ್ತ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಡಿಡಿಪಿಐಗೆ ವರದಿ ರವಾನೆ: ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕಿಯೊಬ್ಬರು ಕೃಷಿ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿನೀಡಿ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯಿಂದ ಮಾಹಿತಿ ಪಡೆಯಲಾಗಿದೆ. ಒಟ್ಟು 8 ಜನ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಶಾಲೆ ಮುಖ್ಯಶಿಕ್ಷಕರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕ್ಕಾಗಿ ಡಿಡಿಪಿಐ ಅವರಿಗೆ ವರದಿ ಕಳಿಸಲಾಗಿದೆ ಎಂದು ಹುಲಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಂಜುವಕುಮಾರ ಕಾಂಗೆ ತಿಳಿಸಿದ್ದಾರೆ.
ಸಿಡಿಪಿಓ ಭೇಟಿ :ವಿದ್ಯಾರ್ಥಿಗಳನ್ನು ಶಿಕ್ಷಕಿಯೊಬ್ಬರು ತಮ್ಮ ಜಮೀನಿನಲ್ಲಿ ಕೃಷಿ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡ ಮಾಹಿತಿ ಆಧಾರದ ಮೇಲೆ ಸಿಡಿಪಿಓ ಶಾರದಾ ಕಲ್ಮಾಲಕರ್ ಹುಲಸೂರನ ಸಂತ ರಘುನಾಥ ಮಹಾರಾಜ ಪ್ರೌಢಶಾಲೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಶಾಲೆ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಂಡ ಶಿಕ್ಷಕಿ ಮೇಲೆ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾರ್ಮಿಕರ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸಂತೋಷ ಗಾಯಕವಾಡ ಶಾಲೆಗೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಆದರೆ ಮಕ್ಕಳ ನಿಖರವಾದ ವಯಸ್ಸಿನ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ, 14 ವರ್ಷದ ಒಳಗಿನ ಮಕ್ಕಳಾಗಿದ್ದಲ್ಲಿ ಬಾಲ ಕಾರ್ಮಿಕ ನಿರ್ಮೂಲೆ ಪ್ರಕರಣದಡಿ ಸಂಬಂಧಿತರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.