ವಿದ್ಯುತ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಬ್ಬು ಬೆಳೆ ಸುಟ್ಟು ಭಸ್ಮ ಬೀದರ್: ಅತಿವೃಷ್ಟಿ - ಅನಾವೃಷ್ಟಿಯಿಂದ ರೈತರು ಮೊದಲೇ ಹೈರಾಣಾಗಿ ಹೋಗಿದ್ದಾರೆ. ಇಂತಹುದಲ್ಲಿ ಬೆಳೆದ ಬೆಳೆ ಕಬ್ಬು ವಿದ್ಯುತ ಶಾರ್ಟ್ ಸರ್ಕ್ಯೂಟ್‌ಗೆ ಸುಟ್ಟು ಕರಕಲಾಗಿದೆ. ಬೀದರ್ ತಾಲೂಕಿನ ಮೊಗದಾಳ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಮೊಗದಾಳ ಗ್ರಾಮದ ರೈತ ಚಂದ್ರಶೆಟ್ಟಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಗೆ ಹಾನಿಯಾಗಿದೆ. ಬೆಳೆ ಹಾನಿಯಿಂದ ಅಂದಾಜು 1ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪಂಚನಾಮೆ ನಡೆಸಿದ್ದಾರೆ. ಒಂದು ಎಕರೆಯಲ್ಲಿ ಬೆಳೆದಿಂದ ಕಬ್ಬು ಉತ್ತಮವಾದ ಫಸಲು ಬಂದಿತ್ತು. ಇನ್ನೇನೂ ಕಾರ್ಖಾನೆಗೆ ಸರಬರಾಜು ಮಾಡಬೇಕು ಎನ್ನುವಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಬೆಳೆ ಹಾನಿಯಿಂದ ಸಂಕಟ್ಟಕ್ಕೆ ಸಿಲುಕಿರುವ ರೈತನಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಬೇಮಳಖೇಡಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲಿಸ್ ಅಧಿಕಾರಿಗಳು ಕಬ್ಬು ಸುಟ್ಟ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮ ವರದಿ ನೀಡಿದ್ದಾರೆ. ಇಷ್ಟಾದರೂ ಜೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಜಮೀನಿನಲ್ಲಿ ಟ್ರಾನ್ಸ್ಫಾರ್ಮರ್ ಇದೆ. ಹಲವುಬಾರಿ ಕಿಡಿ ಕಾರುವುದು ಕಂಡು ಬಂದಿದೆ. ಇದೀಗ ಕಬ್ಬು ಸುಟ್ಟು ಭಸ್ಮವಾಗಿದ್ದು, ನಮ್ಮ ಬದುಕಿಗೆ ಕತ್ತಲೆ ಆವರಿಸಿದೆ. ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳು ಮತ್ತು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಬೆಳೆ ನಾಶದ ಪರಿಹಾರ ಒದಗಿಸಬೇಕು ಮತ್ತು ಶಾರ್ಟ್ ಸರ್ಕ್ಯೂಟ್ ಆದ ಸ್ಥಳ ಪರಿಶೀಲನೆ ನಡೆಸಿ ಟ್ರಾನ್ಸ್ ಫಾರ್ಮ್ ಸ್ಥಳಾಂತರ ಮಾಡಬೇಕು ಎಂದು ರೈತ ಚಂದ್ರಶೆಟ್ಟಿ ಒತ್ತಾಯಿಸಿದರು.
ಇದನ್ನೂ ಓದಿ:ಬೀದರ್ ಅಗ್ನಿವೀರ್ ನೇಮಕಾತಿ: ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ 3,007 ಅಭ್ಯರ್ಥಿಗಳು