ಬೀದರ್:ಶೋಷಿತರು, ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಮೂಲಕ ನೊಂದವರನ್ನು ಮುಖ್ಯವಾಹಿನಿಗೆ ತರುವ ಮಹತ್ವಾಕಾಂಕ್ಷಿ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ ಈ ತಾಲೂಕಿನಲ್ಲಿ ಜನರಿಂದ ದೂರವಾಗಿದೆ. ಅಧಿಕಾರಿಗಳು ಕಚೇರಿಗೆ ಬರೋದಿಲ್ಲ. ಸಿಬ್ಬಂದಿ ಮೇಲೆ ಹಿಡಿತವಿಲ್ಲ. ಪ್ರಶ್ನೆ ಮಾಡಬೇಕಾದ ಜನಪ್ರತಿನಿಧಿಗಳು ಮೌನ ಮುರಿಯುತ್ತಿಲ್ಲ. ಹೀಗಾಗಿ ಬಡವರ ಪಾಲಿನ ಸಾಕಷ್ಟು ಯೋಜನೆಗಳು ಉಳ್ಳವರ ಪಾಲಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಸಮಾಜ ಕಲ್ಯಾಣ ಇಲಾಖೆ ತಾಲೂಕು ಕಚೇರಿಗೆ ಅಧಿಕಾರಿ ಬರೋದು ವಾರಕ್ಕೊಮ್ಮೆ, ಹೀಗಾಗಿ ಸಿಬ್ಬಂದಿ ಹಿಡಿತ ತಪ್ಪಿ ಕರ್ತವ್ಯಕ್ಕೆ 'ಚಕ್ಕರ್' ಹಾಕ್ತಾರೆ. ಇದರಿಂದ ಶೋಷಣೆಗೊಳಗಾದ ಜನರು ಸರ್ಕಾರದ ಯೋಜನೆಗಳ ಬಗ್ಗೆ ಯಾರ ಬಳಿ ಹೊಗಿ ಕೇಳಬೇಕೆಂಬುದೇ ಗೊತ್ತಾಗದ ಹಾಗೆ ಆಗಿದೆ. ಹೀಗಾಗಿ ಸರ್ಕಾರದ ಅನುದಾನ ಅಧಿಕಾರಿಗಳೇ ಫಲಾನುಭವಿ ಪಟ್ಟಿ ತಯಾರಿಸಿ ಉಳ್ಳವರ ಪಾಲು ಮಾಡುತ್ತಾರೆ. ಇದು ಇಂದಿನ ಕಥೆ ಅಲ್ಲ. ಕಳೆದ ದಶಕಗಳಿಂದ ಈ ತಾಲೂಕಿನಲ್ಲಿ ಶೋಷಿತರ ಮೇಲೆ ನಡೆಯುತ್ತಿರುವ ಸರ್ಕಾರಿ ಅನ್ಯಾಯ ಅಂತಾರೆ ಸ್ಥಳೀಯ ಮುಖಂಡ ಇಮಾನುವೇಲ್.