ಹೊಸಪೇಟೆ: ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ನೀಡದಿದ್ದರೆ, ವಿಧಾನ ಸೌಧ ಹಾಗೂ ಮುಖ್ಯಮಂತ್ರಿ ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಇಂದು ವಾಲ್ಮೀಕಿ ಜಾತ್ರೆ ನಿಮಿತ್ಯವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಫೆಬ್ರುವರಿ 9ರಂದು ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವ ದಿನದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ವಾಲ್ಮೀಕಿ ಸಮುದಾಯ ಮನೆಗೆ ಕಳುಹಿಸಲಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಾತ್ಮಕವಾದ ಹಕ್ಕುಗಳನ್ನು ಸಮುದಾಯಕ್ಕೆ ಒದಗಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು. ಮೊದಲು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ನೀಡಲಿ, ಬಳಿಕ ಬೇರೆ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲಿ ಎಂದು ಬೇಡಿಕೆಯಿಟ್ಟರು.
ಉಪಚುನಾವಣೆಯಲ್ಲಿ ನಮ್ಮ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ನಾಯಕ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಭರವಸೆ ನೀಡಿತ್ತು. ಪಕ್ಷದಲ್ಲಿ ಇಬ್ಬರು ನಾಯಕ ಸಮುದಾಯದ ಪ್ರಬಲ ನಾಯಕರಿದ್ದಾರೆ. ಅವರಲ್ಲಿ ಒಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 45 ವರ್ಷದಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಹೀಗಾಗುತ್ತಿದೆ. ತಮಿಳುನಾಡು ಹಾಗೂ ಮಹರಾಷ್ಟ್ರದಲ್ಲಿ ಶೇ.60ರಷ್ಟು ಮೀಸಲಾತಿ ನೀಡಲಾಗಿದೆ. ಅದೇ ರೀತಿಯಾಗಿ ಕರ್ನಾಟಕದಲ್ಲೂ ನೀಡಬೇಕು. ಸಮುದಾಯದ ಅಭಿವೃದ್ಧಿ ಕುರಿತಾಗಿ ಆಯೋಗವು ಕೆಲ ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಅದಕ್ಕೆ ಕ್ಯಾಬಿನೆಟ್‌ನೊಳಗೆ ಒಪ್ಪಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.