ಬಸವಕಲ್ಯಾಣ (ಬೀದರ್): ಕೆಲ ದಿನಗಳ ಹಿಂದೆ ಸುರಿದ ಅಧಿಕ ಮಳೆಯಿಂದಾಗಿ ಬೆಳೆ ಹಾನಿಯಾದ ತಾಲೂಕಿನ ವಿವಿಧ ಗ್ರಾಮಗಳಿಗೆ ವಿಧಾನ ಸಭಾ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.
ಮೊದಲಿಗೆ ಕಲಬುರ್ಗಿಯಿಂದ ಕಮಲಾಪೂರ ಮಾರ್ಗವಾಗಿ ತಾಲೂಕಿನ ಕಲಖೋರಾ ಗ್ರಾಮಕ್ಕೆ ಆಗಮಿಸಿದ ಸಿದ್ಧರಾಮಯ್ಯ, ಕಲಖೋರಾ ಗ್ರಾಮದ ರೈತ ಗುರಪ್ಪ ವಾಲಿ ಜಮೀನು, ಚಿಕನಾಗಾಂವ ಗ್ರಾಮದಲ್ಲಿ ರೈತ ಸಂತೋಷ ಅವರ ಜಮೀನಿಗೆ ಹಾಗೂ ಮುಡಬಿ ಗ್ರಾಮದ ರೈತ ಅಣ್ಣಾರೆಡ್ಡಿ ಅವರ ಜಮೀನಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬೆಳೆಗಳನ್ನು ವೀಕ್ಷಿಸಿದರು.
ಬೆಳೆ ಹಾನಿಯಾದ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ಸ್ಥಳದಲಿದ್ದ ರೈತರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಂದ ಹಾನಿ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಧನ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.
ನಂತರ ನಗರದ ವಾರ್ಡ್ ಸಂಖ್ಯೆ-14ರಲ್ಲಿಯ ಬಡಾವಣೆಗೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ, ಮಳೆಯಿಂದಾಗಿ ಕುಸಿದು ಬಿದ್ದ ಮನೆ ಹಾಗೂ ಹಾಳಾದ ರಸ್ತೆಗಳನ್ನು ವಿಕ್ಷಿಸಿದರು. ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿ ಸೃಷ್ಟಿಯಾಗಿ ಸುಮಾರು 2.50 ಲಕ್ಷ ಹೆಕ್ಟರ್ ಪ್ರದೇಶಲ್ಲಿಯ ಸೋಯಾ, ತೊಗರಿ, ಉದ್ದು, ಹೆಸರು ಸೇರಿದಂತೆ ರೈತರ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿ, 1500 ಕೋಟಿಗೂ ಅಧಿಕ ಮೌಲ್ಯದ ಬೆಳೆ ಹಾನಿಯಾಗಿವೆ.
ಅಧಿಕ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಮಣ್ಣು ಸಹಿತ ಬೆಳೆಗಳು ಕೊಚ್ಚಿ ಹೋಗಿವೆ. ಇದರಿಂದ ರೈತ ಸಮುದಾಯ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಮಂತ್ರಿಗಳು, ಪ್ರತಿನಿಧಿಗಳು ರೈತರ ಜಮೀನುಗಳಿಗೆ ಭೇಟಿನೀಡಿ ಪರಿಹಾರ ಕಲ್ಪಿಸುವ ಭರವಸೆ ನೀಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡದೇ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು. ರೈತರಿಗೆ ಪರಿಹಾರ ಕಲ್ಪಿಸಲು ವಿಧಾನ ಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ್ ಪಾಟೀಲ್ ಹುಮನಾಬಾದ, ಡಾ: ಅಜಯಸಿಂಗ್, ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದ ಅರಳಿ, ದಿ.ಶಾಸಕ ಬಿ.ನಾರಾಯಣರಾವ ಅವರ ಪುತ್ರ ಗೌತಮ್ ನಾರಾಯಣರಾವ, ಜಿಪಂ ಅಧ್ಯಕ್ಷೆ ಗೀತಾ ಚೀದ್ರಿ, ಸದಸ್ಯ ರಾಜಶೇಖರ್ ಮೇತ್ರೆ, ತಾಪಂ ಅಧ್ಯಕ್ಷೆ ಯಶೋಧಾ ರಾಠೋಡ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶಟ್ಟಿ, ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ, ಶಿವರಾಜ ನರಶಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.