ಬೀದರ್ :ರಾಜ್ಯದ ಜನರಿಗೆ 5 ಭಾಗ್ಯಗಳು ಕೊಡುತ್ತೇನೆ ಎಂದು ಹೇಳಿ ವಂಚನೆ ಮಾಡಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ. ಅಧಿಕಾರ ಬಂದಮೇಲೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಬರೆ ಎಳೆಯುವ ಕೆಲಸ ಕಾಂಗ್ರೆಸ್ ಮಾಡಿದ್ದು, ವಾಣಿಜ್ಯೋದ್ಯಮಕ್ಕೆ ಸಾಕಷ್ಟು ನಷ್ಟವಾಗಿರುವುದರಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇವರಿಗೆ ಬಿಜೆಪಿ ಪೂರ್ಣ ನೈತಿಕ ಬೆಂಬಲ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೀದರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯ ಹಾಗು ಕೇಂದ್ರದಲ್ಲಿ ಬಂದ ಮೇಲೆ ಕೋವಿಡ್ ಸಮಯದಲ್ಲಿ ಬಡವರಿಗೆ 10 ಕೆಜಿ ಅಕ್ಕಿ ನೀಡುವ ಕೆಲಸವನ್ನು ಮಾಡಿದೆ. ಆ ಸಂಕಷ್ಟ ಸಂದರ್ಭದಲ್ಲಿ ಯಾರು ಆಹಾರವಿಲ್ಲದೆ ಕೊರಗಬಾರದು ಎಂದು ಕೇಂದ್ರ ಸರ್ಕಾರ ಕೊಟ್ಟಿತ್ತು. ಈಗಲು ನಮ್ಮ ಸರ್ಕಾರ ದೇಶದ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಅಕ್ಕಿ ಹಂಚಿಕೆ ಮಾಡುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ 10 ಕೆಜಿ ಕೊಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿದರು. ಆ ವೇಳೆ ಯಾವ 10 ಕೆಜಿ ಅಕ್ಕಿ ಎಂದು ಹೇಳಿದ್ದೀರಿ. ಕೇಂದ್ರ ಸರ್ಕಾರದ್ದು ಸೇರಿಸಿ ಹೇಳಿದ್ರಾ. ನಿಮ್ಮ ಕಾಂಗ್ರೆಸ್ ಪಾರ್ಟಿಯದ್ದು ಅಂತ ಹೇಳಿದ್ರಾ. ಹೀಗಾಗಿ ನೀವು ರಾಜ್ಯದ ಜನರಿಗೆ ಕೊಡಬೇಕಾಗಿರುವುದು 15 ಕೆಜಿ ಅಕ್ಕಿ. ಇದನ್ನು ಕೊಡಲು ವಿಫಲವಾದ ಕಾರಣ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಇಡೀ ದೇಶದಲ್ಲಿ ಯಾವ ರೀತಿ ಎಲ್ಲಾ ರಾಜ್ಯಗಳಿಗೆ ಸರಿಸಮಾನವಾಗಿ ಅಕ್ಕಿ ಹಂಚುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ.