ದೇಶ ದ್ರೋಹದ ಕೇಸ್ ಎದುರಿಸುತ್ತಿರುವ ಶಾಹೀನ್ ಸಂಸ್ಥೆ ಇದೀಗ ಕೊರೊನಾ ಕ್ವಾರಂಟೈನ್ ಕೇಂದ್ರ .!
ಶಹಪೂರ್ ಗೇಟ್ ಬಳಿ ಇರುವ ಶಾಹೀನ್ ಶಿಕ್ಷಣ ಸಂಸ್ಥೆ ಈಗ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ಕ್ವಾರಂಟೈನ್ ಕೇಂದ್ರವಾಗಿದೆ. ಸಧ್ಯ ಸಂಸ್ಥೆಯ 40 ಕೊಠಡಿಯಲ್ಲಿ 193 ಜನ ಶಂಕಿತ ಸೊಂಕಿತರನ್ನು ಚಿಕಿತ್ಸೆ ನೀಡಲಾಗ್ತಿದೆ. ಇದರ ಎಲ್ಲಾ ಖರ್ಚುಗಳು ಕೂಡ ಸಂಸ್ಥೆ ನೋಡಿಕೊಳ್ಳುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಹೇಳಿದ್ದಾರೆ.
ಶಾಹೀನ್ ಸಂಸ್ಥೆ
ಬೀದರ್: ಪೌರತ್ವ ಕಾಯ್ದೆ ತಿದ್ದುಪಡಿ ವಿರೊಧಿಸಿ ಶಾಲಾ ವಾರ್ಷಿಕೊತ್ಸವದ ವೇದಿಕೆಯಲ್ಲಿ ದೇಶ ವಿರೋಧಿ ಪದಗಳು ಬಳಕೆ ಮಾಡಿದ ಆರೋಪದ ಅಡಿ ಪ್ರಕರಣ ಎದುರಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆಯ ಕಟ್ಟಡ ಇಂದು ಕೊರೊನಾ ಪೀಡಿತರ ಕ್ವಾರಂಟೈನ್ ಆಗಿ ಕೆಲಸ ಮಾಡುತ್ತಿದೆ.
ಬೀದರ್ ನಗರದಲ್ಲಿ ಕ್ವಾರಂಟೈನ್ ಸ್ಥಾಪನೆ ಮಾಡಲು ಮುಂದಾದ ಜಿಲ್ಲಾಡಳಿತಕ್ಕೆ ಸ್ಥಳೀಯ ಜನರು ಅವಕಾಶ ಮಾಡಿಕೊಡಲಿಲ್ಲ. ಕೊರೊನಾ ಸೊಂಕು ಪೀಡಿತರನ್ನು ನಮ್ಮ ಭಾಗದಲ್ಲಿ ತರುವುದು ಬೇಡ ಎಂದು ವಿರೋಧಿಸಿದ್ದರು. ಇದೇ ವೇಳೆಯಲ್ಲಿ ಶಾಹೀನ್ ಸಂಸ್ಥೆ ಮುಂದಾಗಿ ನಮ್ಮ ಸಂಸ್ಥೆಯ ಕಟ್ಟಡದಲ್ಲಿ ಕೊರೊನಾ ಶಂಕಿತ ಸೊಂಕಿತರ ಕ್ವಾರಂಟೈನ್ ಮಾಡುವಂತೆ ಮನವಿ ಮಾಡಿದಕ್ಕೆ ಜಿಲ್ಲಾಡಳಿತ ಸಮ್ಮತಿಸಿದೆ ಎನ್ನಲಾಗಿದೆ.
ಶಾಲೆಯ ಕೋಠಡಿಗಳಲ್ಲಿ ಸಂಸ್ಥೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದಲ್ಲದೆ ಸಂಸ್ಥೆಯ ಖರ್ಚಿನಲ್ಲೆ ಕೊರೊನಾ ಶಂಕಿತ ಸೊಂಕಿತರಿಗೆ ಕ್ವಾರಂಟೈನ್ನಲ್ಲಿ ನಿಗಾ ಇಡಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ದೇಶ ದ್ರೋಹದ ಆರೋಪದ ಅಡಿಯಲ್ಲಿ ಸಂಸ್ಥೆ ಅಧ್ಯಕ್ಷ ಸೇರಿದಂತೆ ನಾಟಕ ಪ್ರದರ್ಶನ ಮಾಡಿದ ವಿಧ್ಯಾರ್ಥಿನಿಯ ತಾಯಿ ಹಾಗೂ ಶಿಕ್ಷಕಿಯ ಮೇಲೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇಶ ದ್ರೋಹದ ಆರೋಪದಡಿ ಶಿಕ್ಷಕಿ ಹಾಗೂ ವಿಧ್ಯಾರ್ಥಿನಿ ತಾಯಿಯನ್ನು ಬಂಧಿಸಲಾಗಿತ್ತು.
ಈ ವೇಳೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಶಾಹಿನ್ ಸಂಸ್ಥೆಯ ಪರ ವಿರೊಧ ಕುರಿತು ಚರ್ಚೆಗಳಾಗಿದ್ದವು. ಹಲವು ನಾಯಕರು ಜೈಲಿನಲ್ಲಿದ್ದವರನ್ನು ಭೇಟಿ ಮಾಡಿ ಬೆಂಬಲಕ್ಕೆ ನಿಂತಿದ್ದರು. ಈ ಎಲ್ಲದರ ನಡುವೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಅಧ್ಯಕ್ಷ ಅಬ್ದುಲ್ ಖದೀರ್ ಹಾಗೂ ಜೈಲಿನಲ್ಲಿದ್ದ ಶಿಕ್ಷಕಿ ಹಾಗೂ ಮಗುವಿನ ತಾಯಿ ಹೊರ ಬಂದಿದ್ದಾರೆ.