ಬೀದರ್:ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಓಂಕಾರ, ಕೊಣಮೇಳಕುಂದಾ ಗ್ರಾಮದ ಅನಿಲಕುಮಾರ್, ಕಮಲನಗರ ಗ್ರಾಮದ ಹಾಜಿಪಾಶಾ ಹಾಗು ಭಾಲ್ಕಿ ಪಟ್ಟಣದ ಜನತಾ ನಗರದ ಅಸ್ಲಂ ಬಂಧಿತರು. ಇವರಿಂದ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಔರಾದ್ ತಾಲೂಕಿನ ವಡಗಾಂವ್ ಕಂದಗೂಳ ರಸ್ತೆ ಪಕ್ಕದಲ್ಲಿರುವ ಶಿವಾ ಪಂಕ್ಷನ್ ಹಾಲ್ ಬಳಿ ತೆಲಂಗಾಣ ಮೂಲಕ ಟೆಂಪೋವೊಂದರಲ್ಲಿ 592 ಕೆ.ಜಿ ಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಇತರ ಸಿಬ್ಬಂದಿ ಭಾಗಿಯಾಗಿದ್ದರು. ಈ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.