ಬಸವಕಲ್ಯಾಣ(ಬೀದರ್):ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಲು ಸಾಗಿಸುತ್ತಿದ್ದ ವೇಳೆ ಲಾರಿ ಸಹಿತ 7.80 ಲಕ್ಷ ರೂ. ಮೌಲ್ಯದ 26 ಟನ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ ಹೈದರಾಬಾದ್ ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ-65ರಿಂದ ಹುಮನಾಬಾದ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವಾಗ ತಡೋಳಾ ಸಮೀಪ ಅಧಿಕಾರಿಗಳ ತಂಡ ದಾಳಿ ನಡೆಸಿ 26 ಟನ್ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.
ತಹಶಿಲ್ದಾರ್ ಸಾವಿತ್ರಿ ಸಲಗರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಾದ ನೀಲಮ್ಮ ಗಾಯಕವಾಡ, ರಾಮರತನ ದೇಗಲೆ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣ ಬಯಲು: ತಡೋಳಾ ಸಮೀಪ ಅಧಿಕಾರಿಗಳ ತಂಡ ದಾಳಿ ನಡೆಸಿದ ಬಳಿಕ ಮಧ್ಯಾಹ್ನ 26 ಟನ್ ಅಕ್ಕಿ ತುಂಬಿದ ಮತ್ತೊಂದು ಲಾರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಒಂದೇ ದಿನದಲ್ಲಿ ಎರಡು ಲಾರಿ ಅಕ್ಕಿ ವಶಪಡಿಸಿಕೊಳ್ಳುವ ಮೂಲಕ ಆಹಾರ ಇಲಾಖೆ ಅಧಿಕಾರಿಗಳ ತಂಡ ಕಾಳ ಸಂತೆಯ ಕರಾಳ ಮುಖವನ್ನು ಬಯಲಿಗೆಳೆದಿದೆ.