ಬಸವಕಲ್ಯಾಣ(ಬೀದರ್) :ಕೋವಿಡ್-19 ಅಗತ್ಯ ಸೇವೆಗಳು ಮತ್ತು ಇತರ ಸೇವೆ ಪಟ್ಟಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರನ್ನ ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ಸಾಕ್ರಾಮಿಕ ರೋಗ ತಡೆಗಟ್ಟುವ ವಿಚಾರದಲ್ಲಿ ಕಂದಾಯ ಇಲಾಖೆ ಮಹತ್ವದ ಕರ್ತವ್ಯ ನಿಭಾಯಿಸುತ್ತಿದೆ. ಬೇರೆ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಮತ್ತು ಅಗತ್ಯ ಕ್ರಮ ಜರುಗಿಸಲು ಸೂಚಸಿದಾಗ ರಾಜ್ಯ ಸರ್ಕಾರದ ಎಲ್ಲಾ ಮಾರ್ಗಸೂಚಿಗಳ ಅನ್ವಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನ ಪೂರೈಸುವ ಕಾರ್ಯದಲ್ಲಿ ಕಂದಾಯ ಇಲಾಖೆ ತೊಡಗಿದೆ.
ಗ್ರಾಮ ಸಹಾಯಕರು,ಗ್ರಾಮ ಲೆಕ್ಕಿಗರು,ರಾಜಸ್ವ ನಿರೀಕ್ಷಕರು,ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್, ಕೊರೊನಾ ವೈರಸ್‌ನಿಂದ ಎದುರಾಗಬಹುದಾದ ಅಪಾಯವನ್ನು ಅರಿತರೂ ಸಹ ಸರ್ಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಬಸವಕಲ್ಯಾಣ ತಾಲೂಕು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಸಾಕಷ್ಟು ಜನರು ಅಲ್ಲಿಂದ ಬರುತ್ತಿದ್ದಾರೆ. ಅವರನ್ನ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ವಲಸೆ ಕಾರ್ಮಿಕರನ್ನ ಗುರುತಿಸಿ ಅವರಿಗೆ ಆಹಾರ,ದಿನಸಿ ಸೇರಿ ಅವಶ್ಯಕ ವಸ್ತುಗಳನ್ನ ಪೂರೈಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ಅವರ ಕುಟುಂಬ ಅವಲಂಬಿತವಾಗಿರುತ್ತದೆ. ಹೀಗಾಗಿ ಕೋವಿಡ್-19 ಅಗತ್ಯ ಸೇವೆಗಳು ಮತ್ತು ಇತರ ಸೇವೆ ಪಟ್ಟಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನ ಸೇರಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.