ಬಸವಕಲ್ಯಾಣ: ದೆಹಲಿಯ ತಬ್ಲಿಘಿ ಜಮಾತ್ಗೆ ತೆರಳಿ ನಗರಕ್ಕೆ ಮರಳಿ ಬಂದಿರುವ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆತಂಕದಲಿದ್ದ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ.
ನಗರದ ಆಝಾಮ್ ಕಾಲೋನಿಯ 59 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಆತನ ಇಡೀ ಕುಟುಂಬ ಸೇರಿದಂತೆ ಆಝಾಮ್ ಕಾಲೋನಿಯ 122 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 116 ಜನರ ವರದಿ ನೆಗೆಟಿವ್ ಬಂದಿದ್ದು, ಸಾರ್ವಜನಿಕರು ಸ್ವಲ್ಪ ನಿರಾಳರಾಗಿದ್ದಾರೆ.
ಬಸವಕಲ್ಯಾಣದ 116 ಜನರ ವರದಿ ನೆಗೆಟಿವ್ ಪಾಸಿಟಿವ್ ವ್ಯಕ್ತಿ ಜೊತೆ ವಾಸಿಸುವ ಕುಟುಂಬ ಸದಸ್ಯರು ಹಾಗೂ ಆತನೊಂದಿಗೆ ಪ್ರಥಮ ಸಂಪರ್ಕಕ್ಕೆ ಬಂದಿದ್ದ ಜನರನ್ನು ಈ ಹಿಂದೆಯೇ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಕೊರೊನಾ ಕಾಣಿಸಿಕೊಳ್ಳದ ಕಾರಣ ಎಲ್ಲರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಮನೆಗೆ ಕಳಿಸಲಾಗಿತ್ತು. ದ್ವೀತಿಯ ಸಂಪರ್ಕಕ್ಕೆ ಬಂದಿದ್ದ 122 ಜನರನ್ನು ಗುರುತಿಸಿ ಪರೀಕ್ಷೆಗಾಗಿ ಗಂಟಲು ಹಾಗೂ ರಕ್ತದ ಮಾದರಿ ಕಳಿಸಲಾಗಿತ್ತು. ಅದರಲ್ಲಿ 116 ಜನರ ವರದಿಗಳು ನಗೆಟಿವ್ ಬಂದಿವೆ. ಉಳಿದ 6 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಕೊರೊನಾ ಕಾರಣ ಕೆಂಪು ವಲಯದಲ್ಲಿದ್ದ ಬಸವಕಲ್ಯಾಣ ನಗರ ಈಗ ಗ್ರೀನ್ ಝೋನ್ ಆಗಿ ಪರಿವರ್ತನೆ ಹೊಂದಿದೆ. ಕಳೆದ ಒಂದು ತಿಂಗಳಿನಿಂದ ಆತಂಕ ಎದುರಿಸಿದ ನಗರದ ಜನತೆಗೆ ಈಗ ಬಹುತೇಕ ನಿರಾಳವಾಗುವಂತೆ ಮಾಡಿದೆ.