ಬೀದರ್:ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮೂನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ತುರ್ತು ವಿಪತ್ತು ಪರಿಹಾರ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಸ್ತೃತವಾದ ಸಭೆ ನಡೆದಿದೆ.
ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ 13 ಮತ್ತು 14 ಎರಡು ದಿನಗಳು ಸೇರಿ ಬೀದರ್ ಜಿಲ್ಲಾದ್ಯಂತ ಮುಂದಿನ ಐದು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳುವ ಹಾಗೂ ಗರಿಷ್ಠ ಉಷ್ಣಾಂಶ 24 - 28 ಸೆಲ್ಸಿಯಸ್ ಕನಿಷ್ಠ ಉಷ್ಣಾಶ 18-19 ಸೆಲ್ಸಿಯಸ್ ಇರುವ ಮತ್ತು ಪ್ರತಿ ಗಂಟೆಗೆ ಗಾಳಿಯ ವೇಗವು 3-7 ಕಿ.ಮೀ ಚಲಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ಯಾರೂ ಕೂಡ ಲಘುವಾಗಿ ತೆಗೆದುಕೊಳ್ಳಬಾರದು. ಪೌರಾಯುಕ್ತರು, ತಹಸೀಲ್ದಾರರು, ತಾ.ಪಂ ಇಒಗಳು, ಮುಖ್ಯಾಧಿಕಾರಿಗಳು ಸೇರಿದಂತೆ ಜವಾಬ್ದಾರಿಯುತ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸದ್ಯದ ಪರಿಸ್ಥಿತಿಯ ಸನ್ನಿವೇಶ ಅರಿತು ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳಿಂದ ತುಂಬುವ ಡ್ಯಾಮ್ಗಳಲ್ಲಿನ ನೀರನ್ನು ಗೇಟ್ಗಳಿಂದ ಹೊರಬಿಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಡ್ಯಾಂ ಸುತ್ತಲಿನ ಜನರಿಗೆ ಕಡ್ಡಾಯವಾಗಿ ಸೂಚನೆ ನೀಡಿಯೇ ನೀರು ಬಿಡಲು ಕ್ರಮವಹಿಸಬೇಕು. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಭದ್ರತೆ ದೃಷ್ಟಿಯಿಂದ ಜಿಲ್ಲಾದ್ಯಂತ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಬೀದರ್ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ 24 ಗಂಟೆಗಳ ಸಮಯ ಅವಧಿಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಮೊಬೈಲ್ ಹಾಳಾಗಿದೆ, ನೆಟ್ವರ್ಕ್ ಇಲ್ಲ, ಬ್ಯಾಟರಿ ಬ್ಯಾಕಪ್ ಇಲ್ಲ ಎನ್ನುವ ಯಾವುದೇ ನೆಪ ಹೇಳಬಾರದು. ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು. ಹಾನಿ ಸಂಭವಿಸಿದ ಕೂಡಲೇ ಮೇಲಧಿಕಾರಿಗಳಿಗೆ ತಿಳಿಸಿ ತುರ್ತಾಗಿ ವರದಿ ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಇಂತಹ ತುರ್ತು ಸನ್ನಿವೇಶದಲ್ಲಿ ಸಿಬ್ಬಂದಿ ಕೂಡ ಕಾಳಜಿ ವಹಿಸಿ ಕೆಲಸ ಮಾಡಬೇಕು. ಯಾವ ಸಿಬ್ಬಂದಿ ಕೂಡ ಅನವಶ್ಯಕವಾಗಿ ರಜೆ ಮೇಲೆ ತೆರಳಬಾರದು. ವಿಪತ್ತು ಎದುರಾದ ಸನ್ನಿವೇಶದಲ್ಲಿ ನಿರ್ಲಕ್ಷ್ಯವಹಿಸಿ ಜೀವಹಾನಿಯಾದರೆ ಪ್ರಯೋಜನವಿಲ್ಲ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.