ಬಸವಕಲ್ಯಾಣ: ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಊಟ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರ ಆರೋಗ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ವಿ.ಜಿ. ರೆಡ್ಡಿ ವಿಚಾರಿಸಿದರು.
ಬಸವಕಲ್ಯಾಣ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಡಿಎಚ್ಓ ರೆಡ್ಡಿ, ಒಬ್ಬೊಬ್ಬರನ್ನು ಮಾತನಾಡಿಸಿ ಅವರ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದರು. ಚಿಕಿತ್ಸೆಗಾಗಿ ದಾಖಲಾದ ಜನರಿಗೆ ಸೂಕ್ತ ಔಷಧೋಪಚಾರ ನೀಡುವ ಜೊತೆಗೆ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ವೈದ್ಯರಿಗೆ ಸೂಚಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಜಿ. ರೆಡ್ಡಿ ಅಸ್ವಸ್ಥರಾದ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಬೆಳಗ್ಗೆ ಎಲ್ಲರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಘಟನೆಗೆ ಕಾರಣವಾದ ಆಹಾರದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಜನರು ಸೇವಿಸಿದ ಆಹಾರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ವರದಿ ಬಂದ ನಂತರವೇ ಘಟನೆಗೆ ಯಾವ ಆಹಾರ ಪದಾರ್ಥ ಕಾರಣ ಎನ್ನುವ ಬಗ್ಗೆ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.