ಬಸವಕಲ್ಯಾಣ:ಶರಣರ ಕಾಯಕ ಭೂಮಿ ಸಮಗ್ರವಾಗಿ ಅಭಿವೃದ್ಧಿ ಹೊಂದಿ ಅಂತರ ರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಬೇಕು ಎನ್ನುವುದೇ ತಮ್ಮ ಆಶಯವಾಗಿದೆ. ಮುಂಬರುವ ಕೆಲ ದಿನಗಳಲ್ಲಿ ಬಸವಕಲ್ಯಾಣ ವಿಧಾನ ಸಭೆಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧವಿರುವುದಾಗಿ ಪಕ್ಷದ ಹಿರಿಯ ಮುಖಂಡ, ಕೆಎಸ್‌ಆರ್‌ಟಿಸಿ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಶಾಸಕ ಬಿ.ನಾರಾಯಣರಾವ್ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಅಗಲುತ್ತಾರೆ ಎನ್ನುವುದು ನಾವು ಯಾವತ್ತೂ ನೆನೆಸಿರಲಿಲ್ಲ. ಆದರೆ ವಿಧಿಯಾಟಕ್ಕೆ ಅವರು ಬಲಿಯಾಗಿದ್ದು ದುರಂತವೇ ಸರಿ. ಶಾಸಕರ ನಿಧನದಿಂದಾಗಿ ಈಗ ಉಪ ಚುನಾವಣೆ ಎದುರಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಎಸ್‌ಆರ್‌ಟಿಸಿ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ನಾನು ಕಳೆದ 1985 ರಿಂದಲೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಯುವ ಘಟಕದಿಂದ ಹಿಡಿದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಎಲ್ಲಾ ಘಟಕಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಪಕ್ಷ ವಹಿಸಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದು ವಿವರಿಸಿದರು.
ಗುರುಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಶರಣರು ಮಾಡಿರುವ ಕ್ರಾಂತಿ ವಿಶ್ವಕ್ಕೆ ಪರಿಚಯವಾಗಿದೆ. ಮಾನವ ಹಕ್ಕು, ಸ್ತ್ರೀ ಸ್ವಾತಂತ್ರ‍್ಯಕ್ಕೆ ಆಧ್ಯತೆ ನೀಡಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಪ್ರಜಾ ಪ್ರಭುತ್ವದ ಬುನಾದಿ ಹಾಕಿದ ಸ್ಥಳ ಬಸವಕಲ್ಯಾಣವು ಸಮಗ್ರ ಅಭಿವೃದ್ಧಿ ಆಗಬೇಕು. ಜೊತೆಗೆ ಈ ಕ್ಷೇತ್ರ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಬೇಕು. ಮುಂಬರುವ ದಿನಗಳಲ್ಲಿ ಯಾರೇ ಕ್ಷೇತ್ರದ ಶಾಸಕರಾದರೂ ಕೂಡಾ ಬಸವಕಲ್ಯಾಣವು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಶ್ವವೇ ಬಸವಕಲ್ಯಾಣಕ್ಕೆ ಬಂದು ಶರಣರು ಮಾಡಿರುವ ಕ್ರಾಂತಿಯ ಬಗ್ಗೆ ತಿಳುದುಕೊಳ್ಳುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ 4 ದಶಕಗಳಿಂದ ದುಡಿಯುತ್ತಿದ್ದೇನೆ. ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು 3 ಚುನಾವಣೆಗಳಲ್ಲಿ ಮನವಿ ಮಾಡಿದರು ನಮಗೆ ಅವಕಾಶ ಕಲ್ಪಿಸಿಲ್ಲ. ಶರಣ ತತ್ವ, ಬಸವ ಚಳುವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ತಮ್ಮನ್ನು ಶರಣರ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುವ ಮೂಲಕ ಸ್ಫರ್ಧೆಗೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಬುಳ್ಳಾ ವಿಶ್ವಾಸ ವ್ಯಕ್ತಪಡಿಸಿದರು.