ಬೀದರ್ :ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಕಳೆಗಟ್ಟಿದ್ದ ರಣಗಂಬ ಜಾತ್ರಾ ಮಹೋತ್ಸವವನ್ನು ಈ ವರ್ಷ ಸಂಭ್ರಮದಿಂದ ಆಚರಿಸಲಾಯಿತು.
ವಡಗಾಂವ ದೇ ಗ್ರಾಮದಲ್ಲಿ ರಣಗಂಬ ಜಾತ್ರಾ ಮಹೋತ್ಸವವನ್ನು ಆಚರಿಸಲಾಯಿತು.. ಪರಂಪರಾಗತವಾಗಿ ಈ ಉತ್ಸವವನ್ನು ದೇಶಮುಖ್ ಮನೆತನದವರು ಆಚರಣೆ ಮಾಡುತ್ತಾ ಬಂದಿದ್ದಾರೆ. ರಣಗಂಬವು ಅತ್ಯಂತ ಭಾರವಾಗಿದ್ದು, ಅಂದಾಜು 10ರಿಂದ 15 ಟನ್ ತೂಕ ಹಾಗೂ ಸುಮಾರು 95 ಫೀಟ್ ಉದ್ದವಾಗಿದೆ.
ಯಾವುದೇ ಯಂತ್ರ, ತಂತ್ರದ ಸಹಾಯವಿಲ್ಲದೆ ಕೇವಲ ಮಾನವನ ಕೈಬಲದಿಂದ, ಛಂಗಬಲದಿಂದ ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲಕೆತ್ತುವುದು ಊರಿನ ಜನರ ತಾಕತ್ತು ಹಾಗೂ ಅಭಿಮಾನದ ಪ್ರಶ್ನೆಯಾಗಿ ಭಾವಿಸುತ್ತಾರೆ.
ಯಾವುದೇ ಒಂದು ವರ್ಷ ರಣಗಂಬವನ್ನು ಎತ್ತಿ ನಿಲ್ಲಿಸದಿದ್ದರೆ ಊರು ಶಾಪಗ್ರಸ್ತವಾಗಿ, ಅಪಾಯ ಎದುರಿಸಬೇಕಾಗುತ್ತದೆ ಎಂಬುದು ಊರಿನ ಹಿರಿಯರ ನಂಬಿಕೆ. ರಣಗಂಬವನ್ನು ಹೆಣ್ಣು ದೇವತೆಯ (ಗ್ರಾಮ ದೇವತೆಯ) ಪ್ರತಿರೂಪವೆಂದು ಬಿಂಬಿಸಿ ಊರಿನ ಜನರು ಭಕ್ತಿಯಿಂದ ಸೀರೆ, ಬಳೆ, ಗೋಧಿ, ಉಡಿಯಕ್ಕಿ ತುಂಬಿ ತಮ್ಮ ಹರಕೆ ತೀರಿಸಿದರು.
ಬೆಳಗ್ಗೆ ಮೇಲಕ್ಕೇರಿಸಲು ಆರಂಭಿಸಿ, ಮಧ್ಯಾಹ್ನದವರೆಗೂ ಏರಿಸಿ ಸಂಜೆ ಕೋಲಾಟ, ನೃತ್ಯ, ಆಂಧ್ಯಾ ಮೆರವಣಿಗೆ (ಜೋಕರ್) ಭಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮದ ಜರುಗಿದವು. ನಂತರ ರಣಗಂಬವನ್ನು ನೆಲಕ್ಕೆ ಉರುಳಿಸಲಾಗುತ್ತದೆ.
ರಣಗಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕುಸ್ತಿ ಪ್ರಮುಖ ಆಕರ್ಷಣೆಯಾಗಿದ್ದು, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಬೀದರ್ ಜಿಲ್ಲೆಯ ವಿವಿಧ ಕುಸ್ತಿ ಪಟುಗಳು ಭಾಗವಹಿಸಿದ್ದರು.
ರಣಗಂಬ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದೇಶಮುಖರೆಂಬ ಪಾಳೇಗಾರರು ವಡಗಾಂವನಲ್ಲಿ ಆಳ್ವಿಕೆ ನಡೆಸುತ್ತಿದ್ದು, ಅವರು ವಿರೋಧಿಗಳ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ ಸವಿನೆನಪಿಗಾಗಿ ಬೃಹತ್ ಗಾತ್ರದ ಕಟ್ಟಿಗೆಯ ದಿಮ್ಮಿಯನ್ನು ದೇಶಮುಖರ ಕೋಟೆಯ ಮುಂಭಾಗದ ಆವರಣದಲ್ಲಿ ಮೇಲಕ್ಕೆ ಎತ್ತಿ ನಿಲ್ಲಿಸಿ ವಿಜಯೋತ್ಸವ ಆಚರಿಸಲಾಗುತ್ತಿತ್ತು.
ಈ ಹಿಂದೆ ವಿಜಯನಗರ ಸಾಮ್ರಾಜ್ಯ ಸೇರಿದಂತೆ ಇತರೆ ಮನೆತನಗಳಲ್ಲಿ ಈ ಪದ್ಧತಿ ಆಚರಣೆಯಲ್ಲಿದ್ದದ್ದನ್ನು ನಾವು ಕಾಣಬಹುದು. ಯುದ್ಧದಲ್ಲಿ ಗೆದ್ದ ಸವಿನೆನಪಿಗಾಗಿ ಬೃಹತ್ ಕಂಬವನ್ನು ಎತ್ತಿ ನಿಲ್ಲಿಸುವುದೇ ರಣಗಂಬದ ವಿಶೇಷತೆ.