ಬೀದರ್: ಐದು ಲಕ್ಷ ರೂಪಾಯಿ ಮೌಲ್ಯದ ಕನ್ನಡಕ ಹಾಕಿಕೊಳ್ಳುವ ಶಾಸಕ ರಾಜಶೇಖರ್ ಪಾಟೀಲ್, ಈಶ್ವರ ಖಂಡ್ರೆ ಅವರು ಬಡವರ ಬಗ್ಗೆ ಮಾತನಾಡಲಿಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಖೂಬಾ ಗರಂ ಆಗಿದ್ದರೆ, ಮತ್ತೊಂದೆಡೆ ಮನೆ ಒಡುಕುತನ ಮಾಡುವುದು ಖೂಬಾ ಕೆಲಸ ಎಂದು ಶಾಸಕ ರಾಜಶೇಖರ ಪಾಟೀಲ್ ಏಕವಚನದಲ್ಲಿ ಟಾಂಗ್ ನೀಡಿದ್ದಾರೆ.
ಗಡಿ ಜಿಲ್ಲೆ ಬೀದರ್ನಲ್ಲಿ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಹಿರಿಯ ನಾಯಕರ ನಡುವೆ ವೈಯಕ್ತಿಕ ಆರೋಪ - ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ರಾಜಶೇಖರ ಪಾಟೀಲ್ ಏಕವಚನದಲ್ಲೇ ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ವಾರ್ ನಡೆಸಿದ್ರೆ, ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಖೂಬಾ ಕೂಡ ಟೀಕಾ ಪ್ರಹಾರ ಮಾಡಿದ್ದಾರೆ.
ಒಂದು ಕಡೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದ್ದರೆ, ಕಾಂಗ್ರೆಸ್ ಕೈ ಹಿಡಿದರೆ ನಿಮಗೆ ಏನೂ ಸಿಗಲ್ಲ. ನಾವು ಗೆದ್ದರೆ ಎಲ್ಲ ಯೋಜನೆಗಳು ನಿಮ್ಮ ಗ್ರಾಮದವರೆಗೂ ಬರುತ್ತವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಇಷ್ಟು ದಿನ ಕೇವಲ ರಾಜಕೀಯವಾಗಿ ಕಿತ್ತಾಡುತ್ತಿದ್ದ ನಾಯಕರ ಮಧ್ಯೆ ಈಗ ವೈಯಕ್ತಿಕ ವಾರ್ ಶುರುವಾಗಿದೆ.
ರಾಜಶೇಖರ ಪಾಟೀಲ್ ಸವಾಲು:
ಸಚಿವ ಖೂಬಾ ವಿರುದ್ಧ ಮಾಜಿ ಸಚಿವ ರಾಜಶೇಖರ ಪಾಟೀಲ್ ಟೀಕೆ ಮಾಡಿದ್ದಾರೆ. ಈವರೇನು ಹೈಕಮಾಂಡ್ ರೀತಿ ಆಡುತ್ತಿದ್ದಾರೆ. ಎರಡು ಬಾರಿ ಸಂಸದರಾಗಿ ಈಗ ಕೇಂದ್ರ ಸಚಿವರಾಗಿ ಹೊಸ ಹೊಸ ಶರ್ಟ್ಗಳನ್ನು ಹಾಕಿಕೊಂಡು ಕಲರ್ ಕಲರ್ ಕಾಗೆ ಹಾರಿಸುತ್ತಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ ಹೇಳಲಿ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.