ಬೀದರ್:ಭಾಲ್ಕಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಸೋಮವಾರ ಬೆಳಗ್ಗೆ 11.30ಕ್ಕೆ ಹುಮನಾಬಾದ್ ರಸ್ತೆಯ ಅಮರ ಹಾಸ್ಟೆಲ್ ಎದುರಿನ ಬಯಲು ಪ್ರದೇಶದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಡಾ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಈಶ್ವರ ಖಂಡ್ರೆ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ತಾಲೂಕಿನ ಮೂಲೆ ಮೂಲೆಯಿಂದ ಸುಮಾರು 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಜನರ ಕಷ್ಟ ಸುಖಗಳಲ್ಲಿ ಭಾಗವಹಿಸಿದ ತೃಪ್ತಿ ನನಗಿದೆ. ಈ ಬಾರಿ ಮತದಾರರು ಭಾರಿ ಅಂತರದಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಖಂಡ್ರೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ- ಖಂಡ್ರೆ:ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆ, ಭ್ರಷ್ಟಾಚಾರ, ಆಂತರಿಕ ಕಿತ್ತಾಟ, ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ತೀರ್ಮಾನಿಸಿದ್ದಾರೆ. ಹಾಗಾಗಿ ಮತ್ತೆ ರಾಜ್ಯದಲ್ಲಿ ಭಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆ ಆಗಲಿದೆ ಎಂದು ಖಂಡ್ರೆ ಭವಿಷ್ಯ ನುಡಿದರು.
ಬಿಜೆಪಿ ಲಿಂಗಾಯತ ವೀರಶೈವರನ್ನು ಕಡೆಗಣಿಸಿದೆ- ಖಂಡ್ರೆ: ಲಿಂಗಾಯತ ವೀರಶೈವ ಮುಖಂಡರನ್ನು ಬಿಜೆಪಿ ಕಡೆಗಣಿಸಿ ಅವಮಾನ ಮಾಡುತ್ತಿದೆ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿದ್ರು. ಈಗ ಜಗದೀಶ್ ಶೆಟ್ಟರ್ ಒಂದು ಟಿಕೆಟ್ಗಾಗಿ ಪರದಾಡುತ್ತಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಣ್ಣೀರು ಹಾಕಿ ಕೊನೆಗೆ ಕಾಂಗ್ರೆಸ್ ಸೇರ್ಪೆಡೆಯಾಗಿದ್ದಾರೆ. ಯಾವ ಏಣಿಯಿಂದ ಏರುತ್ತಾರೋ ಆ ಏಣಿಯನ್ನೇ ಒದೆಯುವ ಸಂಸ್ಕೃತಿ ಬಿಜೆಪಿಯರದ್ದಾಗಿದೆ ಎಂದು ಈಶ್ವರ ಖಂಡ್ರೆ ಹರಿಹಾಯ್ದರು.