ಬೀದರ್: ಕರ್ನಾಟಕದ ಬಿಜೆಪಿ ಸರ್ಕಾರ ಲೂಟಿ ಸರ್ಕಾರವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ಲೂಟಿ ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರ ಬಂದಾಗಿನಿಂದ ದುರಾಸೆಯಲ್ಲೇ ತೊಡಗಿ ಅಭಿವೃದ್ಧಿ ಮರೆತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಾಗಿರುವ ಅಭಿವೃದ್ಧಿ ಕುರಿತು ಚುನಾವಣೆ ಎದುರಿಸುವ ಧೈರ್ಯ ಬಿಜೆಪಿಗಿಲ್ಲ. ಹೀಗಾಗಿ ಧರ್ಮ, ಜಾತಿಗಳ ವಿಷಯ ಚರ್ಚೆಗೆ ತಂದು ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸಿದೆ ಎಂದು ಮೋದಿ ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯದಲ್ಲಿ ನಿಮ್ಮ ಸರ್ಕಾರವೇ ಇತ್ತು, ಲೂಟಿ ಮಾಡುವುದಕ್ಕೆ ಬ್ರೇಕ್ ಹಾಕಿ ಅಭಿವೃದ್ಧಿ ಮಾಡುವಂತೆ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು. ದಿನಬಳಕೆ ಪದಾರ್ಥಗಳ ಬೆಲೆಗಳೆಲ್ಲವೂ ಗಗನಕ್ಕೇರಿದೆ. ಇದು ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದರೂ ಈವರೆಗೆ ಅದಕ್ಕೆ ಮೋದಿ ಉತ್ತರ ಕೊಟ್ಟಿಲ್ಲ. ರಾಜ್ಯದ ಬಿಜೆಪಿ ಶಾಸಕರೊಬ್ಬರ ಮನೆಯಲ್ಲಿ 8 ಕೋಟಿ ರೂ ಹಣ ಸಿಕ್ಕಿದೆ. ಯಾವುದೇ ತನಿಖೆ ಮಾಡಲಿಲ್ಲ ಎಂದರು.
ರೈತರ ಸಮಸ್ಯೆ ಆಲಿಸಿದ ಪ್ರಿಯಂಕಾ: ಪ್ರಿಯಂಕಾ ಗಾಂಧಿ ರೈತರ ಸಮಸ್ಯೆ ಆಲಿಸಿದರು. ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳ ಬಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಅವರಿಂದ ಮನವಿ ಸ್ವೀಕರಿಸಿ, ಬೇಡಿಕೆ ಆಲಿಸಿದ ನಂತರ ವೇದಿಕೆಗೆ ಬಂದು ಭಾಷಣ ಮುಂದುವರೆಸಿದರು. ಕಾರಂಜಾ ಸಂತ್ರಸ್ತರು ಹಲವು ತಿಂಗಳಿನಿಂದ ಹೋರಾಟ ಮಾಡುತ್ತಿದ್ದರೂ ಒಬ್ಬ ಮಂತ್ರಿ ಬಂದು ಸಮಸ್ಯೆ ಆಲಿಸಿಲ್ಲ. ಇಂಥ ಸರ್ಕಾರವನ್ನು ಕಿತ್ತು ಹಾಕಿ ಎಂದು ಮನವಿ ಮಾಡಿದರು.