ಬಸವಕಲ್ಯಾಣ ಉಪ ಚುನಾವಣೆ ಮತ ಎಣಿಕೆ ಸಿದ್ಧತೆ ಕಾರ್ಯ ಪೂರ್ಣ, ಕೋವಿಡ್ ಟೆಸ್ಟ್ ಕಡ್ಡಾಯ: ಡಿಸಿ
ಮತ ಏಣಿಕೆ ಕೆಂದ್ರಕ್ಕೆ ಎಲ್ಲ ಅಭ್ಯರ್ಥಿ, ಅಭ್ಯರ್ಥಿ ಏಜೆಂಟ್ ಮತ್ತು ಮತ ಏಣಿಕೆ ಏಜೆಂಟ್‌ರುಗಳು ಬೆಳಗ್ಗೆ 7 ಗಂಟೆಯೊಳಗಾಗಿ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ. ಬೆಳಗ್ಗೆ 7.30ರ ನಂತರ ಬರುವವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಡಿಸಿ ಸೂಚನೆ ನೀಡಿದ್ದಾರೆ.
ಬೀದರ್:ಬಸವಕಲ್ಯಾಣ ಉಪ ಚುನಾವಣೆಯ ಮತ ಎಣಿಕೆಯ ಕಾರ್ಯದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ತಿಳಿಸಿದ್ದಾರೆ.
ನಗರದ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಮೂರು ಕೌಂಟಿಂಗ್ ಹಾಲ್ ನಲ್ಲಿ ಮತ ಎಣಿಕೆ ಆರಂಭವಾಗಲಿದೆ. ಪ್ರತಿ ಕೌಂಟಿಂಗ್ ಹಾಲ್ ನಲ್ಲಿ ತಲಾ ನಾಲ್ಕು ಟೇಬಲ್‌ಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 20 ಸೂಪರವೈಸರಗಳು, ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮತ ಏಣಿಕೆ ಕೆಂದ್ರಕ್ಕೆ ಎಲ್ಲಾ ಅಭ್ಯರ್ಥಿ, ಅಭ್ಯರ್ಥಿ ಏಜೆಂಟ್ ಮತ್ತು ಮತ ಏಣಿಕೆ ಏಜೆಂಟ್‌ರುಗಳು ಬೆಳಗ್ಗೆ 7 ಗಂಟೆಯೊಳಗಾಗಿ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ. ಬೆಳಗ್ಗೆ 7.30ರ ನಂತರ ಬರುವವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.
ವಿಜಯೋತ್ಸವ ಸಂಪೂರ್ಣವಾಗಿ ಬಂದ್
ವಿಜಯೋತ್ಸವ ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೇ 2ರಂದು ಕೂಡ ಲಾಕ್‌ಡೌನ್ ಚಾಲ್ತಿಯಲ್ಲಿರುವುದರಿಂದ ಇದರೊಂದಿಗೆ ಮತ ಏಣಿಕೆ ಕೇಂದ್ರದ ಹೊರಗಡೆ ಯಾವುದೇ ಪಕ್ಷದ ಬೆಂಬಲಿಗರು ಹಾಗೂ ಸಾರ್ವಜನಿಕರು ಗುಂಪು ಸೇರಲು ಸಂಪೂರ್ಣ ನಿಷೇಧ ಮಾಡಲಾಗಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತವು ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಬರುವ ಆಯಾ ಮತ ಏಣಿಕೆ ಏಜೆಂಟ್‌ಗಳಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ರಿಪೋರ್ಟ್ ಪಾಸಿಟಿವ್ ಇದ್ದಲ್ಲಿ ಚುನಾವಣೆ ಎಣಿಕಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ ಎಂದು ಈಗಾಗಲೇ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.
ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್
ಆರ್.ಟಿ.ಪಿ.ಸಿ.ಆರ್. ತಪಾಸಣೆ ರಿಪೋರ್ಟ್ ಬಾರದೇ ಇದ್ದಲ್ಲಿ ಅಂತಹ ಸಿಬ್ಬಂದಿ, ಅಧಿಕಾರಿ, ಏಜೆಂಟ್‌ಗಳ ಕೋವಿಡ್-19 ತಪಾಸಣೆಯು ರ‍್ಯಾಟ್ ಕಿಟ್‌ಗಳ ಮೂಲಕ ಮಾಡಲು 200 ರ‍್ಯಾಟ್ ಕಿಟ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಬಲ್ ಮಾಸ್ಕ್ ಕಡ್ಡಾಯ
ಮತ ಏಣಿಕೆ ಕೊಠಡಿಯ ಒಳಗಡೆ ಕಡ್ಡಾಯವಾಗಿ ಡಬಲ್ ಮಾಸ್ಕ್ ಗಳನ್ನು ಧರಿಸತಕ್ಕದ್ದು ಮತ್ತು ಎನ್-95 ಮಾಸ್ಕ ಅನ್ನು ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಬಸವಕಲ್ಯಾಣ ಉಪ ಚುನಾವಣೆಯ ಮತದಾನವು ಏಪ್ರೀಲ್ 17ರಂದು ಒಟ್ಟು 326 ಮತಗಟ್ಟೆಗಳಲ್ಲಿ ನಡೆದಿತ್ತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 1,24,984 ಪುರಷರ ಮತದಾರರ ಪೈಕಿ 76,451 ಜನರು ಮತ್ತು ಒಟ್ಟು 1,14,794 ಮಹಿಳಾ ಮತದಾರರ ಪೈಕಿ 71,196 ಜನರು ಮತ ಚಲಾಯಿಸಿದ್ದರು. ಇತರ ನಾಲ್ಕು ಮತ್ತು ಪುರುಷರು ಹಾಗೂ ಮಹಿಳೆಯರು ಸೇರಿ ಒಟ್ಟು 2,39,782 ಮತದಾರರ ಪೈಕಿ 1,47,647 ಜನರು ಮತ ಚಲಾಯಿಸಿ ಶೇ.61.58ರಷ್ಟು ಮತದಾನ ದಾಖಲಾಗಿತ್ತು.
ಮತ ಎಣಿಕೆ ಕೇಂದ್ರದಲ್ಲಿ ಸೂಕ್ತ ರಕ್ಷಣೆ ಒದಗಿಸುವ ಹಿನ್ನೆಲೆಯಲ್ಲಿ ಜನರು ಗುಂಪುಗೂಡಿ ತಿರುಗಾಡುವುದು ಮತ್ತು ಇತರೆ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಕಾನೂನು ಬಾಹಿರವಾಗಿ ಗುಂಪುಗೂಡುವುದು, ಓಡಾಡುವುದು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ಮತ್ತು ಮತ ಎಣಿಕೆ ಕೇಂದ್ರದ ಸುತ್ತಲು ಜನರು ಯಾವುದೆ ತರಹದ ಮಾರಕಾಸ್ತಗಳನ್ನು ತರುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.