ಬೀದರ್: ಪ್ರಭು ಚವ್ಹಾಣ್ ಎಂಬ ಹೆಸರಿನವನಾದ ನಾನು, ದೇವರು, ಗೋಮಾತೆ, ಸಂತ ಸೇವಾಲಾಲ್ ಹೆಸರಿನಲ್ಲಿ ಮಾಣ ಮಾಡುತ್ತೇನೆ... ಹೀಗೆ 2ನೇ ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬೀದರ್ ಜಿಲ್ಲೆಯ ಔರಾದ್ (ಮೀಸಲು) ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಂಗಳೂರಿನ ರಾಜಭವನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟ ಸದಸ್ಯರಾಗಿ ಪ್ರಮಾಣವಚಣ ಸ್ವೀಕರಿಸಿದ ಪ್ರಭು ಚವ್ಹಾಣ್ ಅವರು ಲಂಬಾಣಿ ವೇಷ ಧರಿಸಿ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು.
ಔರಾದ್ ತಾಲೂಕಿನ ಘಮಸುಬಾಯಿ ತಾಂಡದಲ್ಲಿ ಮೊತಿಬಾಯಿ ಹಾಗು ಬಾಮಲಾ ಚವ್ಹಾಣ್ ದಂಪತಿಯ ಮಗನಾಗಿ 6-6-1969 ರಲ್ಲಿ ಜನಿಸಿದರು. ಸಕ್ಕುಬಾಯಿ ಅವರೊಂದಿಗೆ ಮದುವೆಯಾದ ಪ್ರಭು ಚವ್ಹಾಣ್ ಅವರಿಗೆ ಪ್ರತೀಕ ಹಾಗೂ ಪ್ರಿಯಾಂಕ ಎಂಬ ಇಬ್ಬರು ಮಕ್ಕಳಿದ್ದಾರೆ. ಮುಂಬೈ ಮೂಲದ ಉದ್ಯಮಿಯಾಗಿದ್ದ ಪ್ರಭು ಚವ್ಹಾಣ್ 2008, 2013 ಹಾಗೂ 2018 ಮೂರು ಚುನಾವಣೆಯಲ್ಲಿ ಸತತವಾಗಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ.
ಕಳೆದ ಬಿಎಸ್ವೈ ಸಂಪುಟದಲ್ಲಿ ಪಶು ಸಂಗೋಪನೆ, ಅಲ್ಪ ಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಖಾತೆ ಅಲ್ಲದೆ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಗೋ ಹತ್ಯೆ ನಿಷೇಧ ವಿಧೇಯಕ ಯಶಸ್ವಿಯಾಗಿ ಜಾರಿಗೆ ತಂದು ಬಿಜೆಪಿ ಪಾಳಯದಲ್ಲಿ ಪ್ರಬಲರು ಎಂದು ಬಿಂಬಿಸಿಕೊಂಡಿದ್ದರು.