ಬಸವಕಲ್ಯಾಣ:ನಗರಸಭೆಯಿಂದ ನಗರದ ಬಸ್ ನಿಲ್ದಾಣದಿಂದ ನಾರಾಯಣಪೂರ ಕ್ರಾಸ್‌ವರೆಗೆ ನಿರ್ಮಿಸಲಾಗುತ್ತಿರುವ ಯುಟಿಲಿಟಿ ಡಕ್ಟ್ ಬಗ್ಗೆ ಕಳಪೆ ಕಾಮಗಾರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕಾಮಗಾರಿ ತೆರವುಗೊಳಿಸಿದರು.
ಕಳಪೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ಅವರು, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.
ಗುರುವಾರ ನಗರಸಭೆ ಅಭಿಯಂತರ (ಜೆಇ) ಗೌತಮ್ ಕಾಂಬಳೆ ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈಗಾಗಲೇ ಕೈಗೊಳ್ಳಲಾದ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಿ, ಮರು ಕಾಮಗಾರಿ ನಡೆಸುವಂತೆ ಸಂಬಂಧಿತ ಗುತ್ತೆದಾರರಿಗೆ ಸೂಚಿಸಿತು.
ಇದೇ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಸದಸ್ಯರಾದ ರವಿ ಬೋರಾಳೆ ಹಾಗೂ ರಾಮ ಜಾಧವ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು, ಯುಟಿಲಿಟಿ ಡಕ್ಟ್ ಕಾಮಗಾರಿಯಲ್ಲಿ ಬಿಳಿ ರೇತಿ ಬಳಸದೆ ಕೇವಲ ಜಲ್ಲಿ ಕಲ್ಲಿನ ಪೌಡರ್ ಬಳಸಿ ಕಾಮಗಾರಿ ನಡೆಸಲಾಗಿದೆ, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವ ಜೊತೆಗೆ ಕಳಪೆ ಕಾಮಗಾರಿ ನಡೆಸಿದ ಗುತ್ತೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚರಂಡಿ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಯುಟಿಲಿಟಿ ಡಕ್ಟ್ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ರಸ್ತೆಯಿಂದ ಚರಂಡಿಗೆ ನೀರು ಹರಿದು ಹೋಗಲು ಯಾವುದೇ ದಾರಿ ಇಲ್ಲ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ನಿಲ್ಲಬೇಕಾಗುತ್ತದೆ ಎಂದು ಸಾರ್ವಜನಿಕರ ಆರೋಪವಾಗಿದೆ. ರಸ್ತೆಯಿಂದ ಚರಂಡಿಗೆ ನೀರು ಸಾಗಲು ಪೈಪ್‌ಗಳನ್ನು ಹಾಕಬೇಕು ಎಂದು ನಗರಸಭೆ ಸದಸ್ಯರು ಸಲಹೆ ನೀಡಿದರು.