ಗುಲಾಬಿ ಬೆಳೆದು ಲಾಭ ಗಳಿಸಿದ ರೈತ ಬೀದರ್: ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರುವ ಯುವ ರೈತರು ಕೃಷಿಯಲ್ಲಿ ಬದುಕಿಲ್ಲ ಎಂದು ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ರೈತ ಮಾತ್ರ ಕೃಷಿಯಲ್ಲೇ ಬದುಕು ಉತ್ತಮ ಎಂದು ಗುಲಾಬಿ ಹೂವು ಬೆಳೆದು ಸಂತಸದ ಜೀವನ ನಡೆಸುವ ಮೂಲಕ ಮಾದರಿಯಾಗಿದ್ದಾನೆ.
ಹೌದು, ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನ ಶಮಿತಾಬಾದ್ ಗ್ರಾಮದ ವೀರೇಂದ್ರ ಚನ್ನಪ್ಪ ಬುಳ್ಳಾ ಎಂಬುವರು ನರೇಗಾ ಯೋಜನೆಯಡಿ ಗುಲಾಬಿ ಹೂವು ಬೆಳೆದು ಲಾಭ ಪಡೆಯುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಗೆ ತಿಲಾಂಜಲಿ ಹೇಳಿ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ, ಗುಲಾಬಿ ಹೂಗಳನ್ನು ತನ್ನ ಜಮೀನಿನಲ್ಲಿ ಅರಳಿಸಿದ್ದಾನೆ.
ವೀರೇಂದ್ರ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹೂವು ಬೆಳೆದು ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದಾರೆ. ಮೊದಲು ಸೋಯಾಬಿನ್, ಉದ್ದು, ಹೆಸರು, ತೊಗರಿ ಜೋಳ ಬೆಳೆದು ನಷ್ಟ ಅನುಭವಿಸಿದ್ದರು. ಹೀಗಾಗಿ, ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಂಡರು. ಹೂ ಬೆಳೆಯಲು ಗ್ರಾಮ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿದಕೂಡಲೇ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದು ಯೋಜನೆಯ ಲಾಭ ಪಡೆದಿದ್ದಾರೆ.
ಇದನ್ನೂ ಓದಿ:ಗುಲಾಬಿ ಬೆಳೆದು ಲಕ್ಷ ಲಕ್ಷ ಆದಾಯ.. ಬಡ ರೈತನ ಬದುಕು ಅರಳಿಸಿತು ರೋಸ್
ಒಂದು ಎಕರೆಯಲ್ಲಿ ಬುಲೆಟ್, ಪನೀರ್ ಎನ್ನುವ ಗುಲಾಬಿ ಹೂ ಬೆಳೆಯಲಾಗಿದ್ದು, ವಾರಕ್ಕೆ 1 ಕ್ವಿಂಟಾಲ್ 20 ಕೆಜಿ ಇಳುವರಿ ಬರುತ್ತದೆ. ಇದರಲ್ಲಿ ಖರ್ಚು ಕಡಿಮೆ ಆದಾಯ ಹೆಚ್ಚು. ಬೇರೆ ಬೆಳೆಯಾದರೆ. ಖರ್ಚು ಹೆಚ್ಚು ಲಾಭ ಕಡಿಮೆ, ಆದರೆ ಹೂವು ಬೆಳೆದಿದ್ದರಿಂದ ಪ್ರತಿ ದಿನಕ್ಕೆ ಒಂದು ಸಾವಿರ ರೂಪಾಯಿ ಕನಿಷ್ಠ ಆದಾಯ ಪಡೆದು ತಿಂಗಳಿಗೆ 30 ರಿಂದ 35,000 ಗಳಿಸಬಹುದು ಎನ್ನುತ್ತಾರೆ ರೈತ ವೀರೇಂದ್ರ.