ಬೀದರ್:ಭಯಾನಕ ಜಲಕ್ಷಾಮದಿಂದ ಬಳಲುತ್ತಿರುವ ಜನರಿಗೆ ಸರ್ಕಾರ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ ನೀರಿನ ಮೇಲೆ ಪುರಸಭೆ ಸದಸ್ಯನ ಕುಟುಂಬಸ್ಥರು ದರ್ಪ ತೋರುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಭಾಲ್ಕಿ ಪಟ್ಟಣದ ದಾಡಗಿಬೆಸ್ ಬಡಾವಣೆ ನಿವಾಸಿಗರಿಗೆ ಸ್ಥಳೀಯ ಪುರಸಭೆ ಸದಸ್ಯ ಮಾಣಿಕರಾವ್ ರೇಷ್ಮೆ ಹಾಗೂ ಪುತ್ರ ಅರುಣಕುಮಾರ್ ರೇಷ್ಮೆ ಪುರಸಭೆ ಟ್ಯಾಂಕರ್ ತಮ್ಮ ಅಧೀನಕ್ಕೆ ಪಡೆದು ಬಡಾವಣೆ ಜನರಿಗಾಗಿ ಬರುವ ನೀರನ್ನು ತಾವೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಡಾವಣೆ ಮಹಿಳೆಯರು ನಮಗೂ ನೀರು ಕೊಡಿ ಎಂದರೆ ಒಂದೊಂದು ಬಿಂದಿಗೆ ನೀರು ಭಿಕ್ಷೆ ನೀಡಿದಂತೆ ನೀಡಿ ಇಲ್ಲಿಂದ ಹೋಗಿ ಇನ್ಮೇಲೆ ಇಲ್ಲಿ ಯಾರು ಬರೋದು ಬೇಡ ಅಂತ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪುರಸಭೆ ಸದಸ್ಯನ ಪುತ್ರ ಅರುಣಕುಮಾರ್ ರೇಷ್ಮೆ ಕಳೆದ ಒಂದು ವಾರದಿಂದ ಟ್ಯಾಂಕರ್ ನೀರು ನೀಡದೆ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಚುನಾವಣೆ ಬಂದಾಗ ನಮ್ಮ ಕಾಲಿಗೆ ಬಿದ್ದು ಮತ ಪಡೆದವರು, ಈಗ ನಾವು ಕಷ್ಟದಲ್ಲಿದ್ದೀವಿ ಸರ್ಕಾರ ನಮಗೆ ಸಹಾಯ ಮಾಡುತ್ತಿದೆ. ಆದರೆ ಪುರಸಭೆ ನೀಡುವ ನೀರೆಲ್ಲಾ ಸದಸ್ಯನ ಮನೆ ಹಾಗೂ ಅವನ ಸಂಬಂಧಿಕರ ಪಾಲಾಗುತ್ತಿದೆ. ಒಂದು ವಾರದಿಂದ ನೀರಿಲ್ಲದೆ ನಾವು ಪರದಾಡುತ್ತಿದ್ದೇವೆ ಎಂದು ಸ್ಥಳೀಯ ಮಹಿಳೆ ಸಂತೋಷಮ್ಮ ನೋವು ಹೊರ ಹಾಕಿದ್ದಾರೆ.
ಟ್ಯಾಂಕರ್ ನೀರಲ್ಲಿ ಪುಸರಭೆ ಸದಸ್ಯನ ಕುಟುಂಬಸ್ಥರ ರಾಜಕೀಯ: ಜನರಿಂದ ಪ್ರತಿಭಟನೆ ಈ ಸದಸ್ಯರ ವರ್ತನೆಯಿಂದ ಬೇಸತ್ತ ಬಡಾವಣೆ ಮಹಿಳೆಯರು ಖಾಲಿ ಬಿಂದಿಗೆ ಹಿಡಿದುಕೊಂಡು ತಾಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದನ್ನು ಗಮನಿಸಿದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ತಕ್ಷಣ ಒಂದು ಟ್ಯಾಂಕರ್ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದು, ಆ ವಾರ್ಡ್ನಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.