ಬಸವಕಲ್ಯಾಣ: ಮೂಲ ಅನುಭವ ಮಂಟಪ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮಠಾಧೀಶರೊಬ್ಬರನ್ನು ಭೇಟಿ ಮಾಡಿ ಚರ್ಚಿಸಲು ನಗರಕ್ಕೆ ಬರಲು ಮುಂದಾಗಿದ್ದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲಾ ಶ್ರೀಗಳನ್ನು ಜಿಲ್ಲೆಯ ಗಡಿಯಲ್ಲಿಯೇ ತಡೆದು ವಾಪಸ್ ಕಳಿಸಿದ ಪ್ರಸಂಗ ಶನಿವಾರ ಜರುಗಿದೆ.
ಪ್ರಮೋದ್ ಮುತಾಲಿಕ್ ಹಾಗೂ ಆಂದೋಲಾ ಶ್ರೀಗಳು ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿ ಬಂದ ಹಿನ್ನೆಲೆ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಆಳಂದ ತಾಲೂಕಿನ ವಿಕೆ ಸಲಗರ ಮಾರ್ಗವಾಗಿ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋಹಿನೂರ್ ಬಳಿ ಪೊಲೀಸ್ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಇಬ್ಬರೂ ಮುಖಂಡರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.
ಸರ್ಕಾರ ಮತ್ತು ಆಡಳಿತ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದ ಪ್ರಮೋದ ಮುತಾಲಿಕ್, ಈ ರೀತಿ ಅನವಶ್ಯಕವಾಗಿ ತಡೆಯುವುದು ಸರಿಯಲ್ಲ. ಬಸವಾದಿ ಶರಣರ ಮೂಲ ಅನುಭವ ಮಂಟಪ ಪತ್ತೆಗಾಗಿ ಬೀದರ್ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಗಳೊಂದಿಗೆ ಚರ್ಚಿಸಲು ನಾವು ಆಗಮಿಸುತ್ತಿದ್ದೇವೆ. ಕೇವಲ 5 ನಿಮಿಷ ಶ್ರೀಗಳನ್ನು ಭೇಟಿ ಮಾಡಿ, ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮುತಾಲಿಕ್ ಕೇಳಿಕೊಂಡರು. ಇದಕ್ಕೆ ಪೊಲೀಸರು ಸ್ಪಂದಿಸದ ಹಿನ್ನೆಲೆ ಕೆಲ ಸಮಯ ರಸ್ತೆ ಮೇಲೆ ಕುಳಿತು ಹಿಂದೂ ವಿರೋಧಿ ಆಡಳಿತಕ್ಕೆ, ಬಸವಕಲ್ಯಾಣ ಶಾಸಕರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಗಡಿಯಲ್ಲೇ ಮುತಾಲಿಕ್, ಆಂದೋಲಾ ಶ್ರೀ ತಡೆದ ಪೊಲೀಸರು ಪ್ರಮೋದ್ ಮುತಾಲಿಕ್ ಹಾಗೂ ಆಂದೋಲಾ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ತಾವು ವಾಪಸ್ ತೆರಳಬೇಕು ಎಂದು ಎಎಸ್ಪಿ ಮಹೇಶ ಮೇಘಣ್ಣನವರ್ ಮನವರಿಕೆ ಮಾಡಿದ ನಂತರ ವಾಪಸ್ ಹೋದರು. ಈ ವೇಳೆ ತಹಶೀಲ್ದಾರ್ ಸಾವಿತ್ರಿ ಸಲಗರ್, ಡಿವೈಎಸ್ಪಿ ಸೋಮಲಿಂಗ ಕುಂಬಾರ್, ಮಂಠಾಳ ಸಿಪಿಐ ರಘುವೀರ್ ಸಿಂಗ್ ಠಾಕೂರ್, ಅಮೂಲ ಕಾಳೆ, ಶ್ರೀಕಾಂತ ಅಲ್ಲಪೂರೆ, ರಾಮಪ್ಪ ಸಾವಳಿ, ಮವ್ಮಠಾಳ ಪಿಎಸ್ಐ ಜೈಶ್ರೀ ಹೊಡೆಲ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೇವೆ: ನಲಪಾಡ್ ಸವಾಲು