ಹಾವೇರಿ: ಸೂಕ್ತದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂ. ಹಣವನ್ನ ಹಾವೇರಿ ಪೊಲೀಸರು ವಶಪಡಿಸಿಕೊಂಡ ಘಟನೆ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಚೆಕ್ಪೋಸ್ಟ್ ಬಳಿ ನಡೆದಿದೆ. ಟೆಂಪೋ ಟ್ರಾವೆಲರ್ನಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಚೆಕ್ಪೋಸ್ಟ್ ಸಿಬ್ಬಂದಿ ತಪಾಸಣೆ ನಡೆಸಿದಾಗ ಈ ಹಣ ಪತ್ತೆಯಾಗಿದೆ.
ಹಣ ಸಾಗಿಸುತ್ತಿದ್ದ ಹೆಚ್ಡಿಎಫ್ಸಿ ಬ್ಯಾಂಕನ ಕ್ಯಾಶ್ ಮ್ಯಾನೇಜಮೆಂಟ ಶಿವಯೋಗಿ ಮುದಿಗೌಡ್ರ, ಹೆಚ್ಡಿಎಫ್ಸಿ ಕ್ಯಾಶ್ ಮ್ಯಾನೇಜಮೆಂಟ್ ಮಲ್ಲಪ್ಪ ಮಹಮೀರಬಗೋಡ್ರ, ಗನ್ ಮ್ಯಾನ್ ಚಂದ್ರಪ್ಪ ದೇವಿಹೊಸೂರು. ಟೆಂಪೋ ಚಾಲಕ ಮಹೇಶ ಕೊಪ್ಪಳದ ಎಂಬುವವರನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಎಸ್ ಎಸ್ ಟೀಮ್ 1 ವೀರಭದ್ರಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹಣ ವಶಪಡಿಸಿಕೊಂಡಿದೆ.
ಬೆಳಗಾವಿ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಸಾರಾಯಿ, ನಗದು ಜಪ್ತಿ:ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಸೋಮವಾರ ದಾಳಿ ನಡೆಸಿದ ಪೊಲೀಸ್, ಅಬಕಾರಿ ಮತ್ತು ಎಫ್‍ಎಸ್‍ಟಿ ತಂಡದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ಸೇರಿ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಗೋಕಾಕ ವಲಯ ವ್ಯಾಪ್ತಿಯ ಕಪರಟ್ಟಿ ಕ್ರಾಸ್‍ನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 3.50 ಲಕ್ಷ ರೂ. ಮೌಲ್ಯದ 656 ಲೀ. ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಗೋಕಾಕ್ ತಾಲೂಕಿನ ಕುಲಗೋಡದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 52 ಲೀ. ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸವದತ್ತಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1.95 ಲಕ್ಷ ರೂ. ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದಾರೆ.