ಬೀದರ್: ಏಪ್ರಿಲ್ 7ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ 100 ಕೆಜಿ ಗಾಂಜಾವನ್ನು ರಾಷ್ಟ್ರೀಯ ಹೆದ್ದಾರಿ 65ರ ನಿಂಬೂರ ಕ್ರಾಸ್ ಬಳಿ ವಶಪಡಿಸಿಕೊಂಡಿದ್ದು, ಜೊತೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾಹಿತಿ ನೀಡಿದ್ದಾರೆ. ಇಲ್ಲಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಾರ್ಯಾಚರಣೆಯಲ್ಲಿ ತೊಡಗಿದವರು ಯಾರು?: ಜಹೀರಾಬಾದ್ ಕಡೆಯಿಂದ ಟಾಟಾ ಸುಮೋ ವಾಹನದಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣನವರ, ಹುಮನಾಬಾದ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪುತ, ಚಿಟಗುಪ್ಪಾ ವೃತ್ತದ ಸಿಪಿಐ ಮಹೇಶಗೌಡ ಪಾಟೀಲ್ ಅವರ ಮಾರ್ಗದರ್ಶದಲ್ಲಿ ಮನ್ನಾಖೇಳ್ಳಿ ಪಿಎಸ್ಐ ಬಸವರಾಜ, ಚಿಟಗುಪ್ಪಾ ಪಿಎಸ್ಐ ಮಹೇಂದ್ರಕುಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಎಫ್ಎಸ್ಟಿ ತಂಡದ ಅಧಿಕಾರಿ ಧೂಳಪ್ಪಾ ಹೊಸಳ್ಳಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದರು.
ಗಾಂಜಾ, ಟಾಟಾ ಸುಮೊ ವಾಹನ, ಮೊಬೈಲ್ ವಶ:ಹುಮನಾಬಾದ್ ತಾಲೂಕಿನ ತಾಳಮಡಗಿಯ ನಿಬ್ಬೂರ ಕ್ರಾಸ್ ಬಳಿ ದಾಳಿ ನಡೆಸಿದಾಗ ಟಾಟಾ ಸುಮೊ ವಾಹನದಲ್ಲಿ ಅಂದಾಜು 1,00,38,500 ಮೌಲ್ಯದ 2 ಕೆಜಿ ತೂಕದ 50 ಪ್ಯಾಕೆಟ್‌ನಲ್ಲಿ ಸಾಗಿಸುತ್ತಿದ್ದ ಒಟ್ಟು 100 ಕೆಜಿ ಗಾಂಜಾ ಪತ್ತೆಯಾಗಿದೆ. ವಿಚಾರಣೆಯಲ್ಲಿ ಅವರು ಆಂಧ್ರಪ್ರದೇಶ ಜಹೀರಾಬಾದ್ನಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದಿದೆ. ಇವರಿಂದ 100 ಕೆಜಿ 385 ಗ್ರಾಂ ಗಾಂಜಾ, ನಾಲ್ಕು ಮೊಬೈಲ್ ಫೋನ್, 800 ರೂಪಾಯಿ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಟಾಟಾ ಸುಮೊ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.