ಬೀದರ್: ಪಿಎಸ್ಐಗೆ ಆವಾಜ್ ಹಾಕಿ ತಲೆಮರೆಸಿಕೊಂಡಿದ್ದ ಮನ್ನಾಖೇಳ್ಳಿ ಪೇದೆಯನ್ನ ಅಮಾನತು ಮಾಡಿ ಎಸ್ಪಿ ನಾಗೇಶ್ ಡಿ.ಎಲ್.ಆದೇಶ ಹೊರಡಿಸಿದ್ದಾರೆ.
ಒಂದು ತಿಂಗಳ ಹಿಂದೆ ಪೇದೆ ಮದರಸಾಬ ಖಟಕ್, ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಹುಲಿಯಪ್ಪ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ.
ಹುಲಿಯಪ್ಪ ತಮ್ಮ ಸ್ಟೇಷನ್ ವ್ಯಾಪ್ತಿಯಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರು ಹಗೂ ಸೀಟ್ ಬೆಲ್ಟ್ ಧರಿಸದೆ ಇರುವವರಿಗೆ ದಂಡ ಹಾಕುತ್ತಿದ್ದರು. ಆ ವೇಳೆ ಪೇದೆ ಮದರಸಾಬ ಸ್ನೇಹಿತರೂ ಕೂಡ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುತ್ತಿದ್ದರಿಂದ ಅವರಿಗೂ ಹುಲಿಯಪ್ಪ ದಂಡ ಹಾಕಲು ಮುಂದಾಗಿದ್ರಂತೆ. ಆಗ ಪೇದೆ ಅವಾಚ್ಯ ಶಬ್ದಗಳಿಂದ ಬೈದು ಹುಲಿಯಪ್ಪನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನ ಪಿಎಸ್ಐ ಹುಲಿಯಪ್ಪ ಹಳೇ ಎಸ್ಪಿ ಟಿ.ಶ್ರೀಧರ್ ಗಮನಕ್ಕೆ ತಂದಾಗ ಆತನ ಮೇಲೆ ಎಫ್ಐಆರ್ ಹಾಕಿ ಬಂಧಿಸುವಂತೆ ಸೂಚಿಸಿದ್ದರು. ಎಸ್ಪಿ ಬಂಧನ ಮಾಡುವಂತೆ ಸೂಚಿಸುತ್ತಿದ್ದಂತೆ ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ಇದೀಗ ನೂತನ ಎಸ್ಪಿ ನಾಗೇಶ್ ಬಂದ ಕೂಡಲೇ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಪೇದೆ ಹಿನ್ನೆಲೆ ಗಮನಿಸಿದ ಎಸ್ಪಿ, ಆತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.