ಬೀದರ್:ಕೋವಿಡ್ ಲಸಿಕೆಯ ಬಗೆಗಿನ ಊಹಾಪೋಹಗಳನ್ನು ಕೇಳಿ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲು ಮನೆ ಬಾಗಿಲಿಗೆ ತೆರಳಿದರೆ ಕಾಡಿಗೆ ಹೋಗಿ ತಪ್ಪಿಸಿಕೊಳ್ಳುವ, ಹಲ್ಲೆ ಮಾಡುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಈ ನಡುವೆ ಬೀದರ್ ಜಿಲ್ಲೆಯ ಎರಡು ಗ್ರಾಮಗಳ ಎಲ್ಲರೂ ಲಸಿಕೆ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಹಾಗೂ ಕಮಲನಗರ ತಾಲೂಕಿನ ಚಾಂದೋರಿ ಗ್ರಾಮಸ್ಥರು ಲಸಿಕೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದಲ್ಲಿ 2,473 ಜನಸಂಖ್ಯೆಯಿದ್ದು, 45-60 ವರ್ಷ ವಯಸ್ಸಿನ 1,054 ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ 258 ಜನ ಎರಡನೇ ಡೋಸ್ ಕೂಡ ಪಡೆದಿದ್ದಾರೆ.
18 ರಿಂದ 44 ವರ್ಷದೊಳಗಿನ 589 ಜನರಲ್ಲಿ 310 ಮಂದಿ ಹಾಗೂ ಗ್ರಾಮದ ಎಲ್ಲಾ ವಿಶೇಷಚೇತನರು ಲಸಿಕೆ ಪಡೆದುಕೊಂಡಿದ್ದಾರೆ. ಕಮಲನಗರ ತಾಲೂಕಿನ ಚಾಂದೋರಿ ಗ್ರಾಮದ ಒಟ್ಟು 2,020 ಜನರಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ.