ಬೀದರ್: ಮರ್ಮಾಂಗ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಲು ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿ ರೋಗಿಯ ಕುಟುಂಬಸ್ಥರು ಅಂಬೇಡ್ಕರ್ ವೃತ್ತದ ಮಧ್ಯೆ ರೋಗಿಯನ್ನು ಇರಿಸಿ, ಪ್ರತಿಭಟನೆ ನಡೆಸಿದರು.
ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ನಡೆದ ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ತಿಳಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ, ಗಲಾಟೆ ನಡೆಯಿತು. ಪರಿಸ್ಥಿತಿ ಕೈ ಮಿರುವ ಹಂತ ಗೋಚರವಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೀಮ್ಸ್ ವೈದ್ಯರ ವಿರುದ್ಧ ರೋಗಿಯ ಕುಟುಂಬಸ್ಥರ ಆಕ್ರೋಶ ಪ್ರಕರಣ ವಿವರ: ಮರ್ಮಾಂಗ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಎರಡು ದಿನಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ರೋಗಿಯ ಕುಟುಂಬಸ್ಥರು ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಚಿಕಿತ್ಸೆ ಕುರಿತು ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತು ಬೆಳೆದು, ಆಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬಸ್ಥರ ನಡುವೆ ಜಗಳ ಉಂಟಾಗಿದೆ.
ಸ್ಥಳಕ್ಕೆ ಬಂದ ನ್ಯೂ ಟೌನ್ ಪೊಲೀಸರು, ತಪ್ಪಿತಸ್ಥರನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ರೋಗಿಯ ಕುಟುಂಬಸ್ಥರು ಆಸ್ಪತ್ರೆಯಿಂದ ರೋಗಿಯನ್ನು ಬಿಡುಗಡೆಗೊಳಿಸಿಕೊಂಡು ನೇರವಾಗಿ ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ಯದೆ, ಸ್ಟೆಚ್ಚರ್ ಜೊತೆಗೆ ರಸ್ತೆಗೆ ಇಳಿದಿದ್ದಾರೆ. ಪೊಲೀಸರು ಹಾಗೂ ವೈದ್ಯರ ವಿರುದ್ಧ ಘೋಷಣೆ ಕೂಗಿ, ಅಂಬೇಡ್ಕರ್ ವೃತದ ಬಳಿ ಧಾವಿಸಿದ್ದಾರೆ. ಇದನ್ನು ತಡೆಯಲು ಬಂದ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.