ಬೀದರ್: ಪಶುಸಂಗೋಪನೆ ಇಲಾಖೆಯ 66 ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಜಿಲ್ಲಾ ಉಪನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶುಸಂಗೋಪನೆ ಇಲಾಖೆಯ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದ ಆದೇಶ ಹೊರಡಿಸಿರುವ ಬಗ್ಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯದರ್ಶಿಯವರ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ, ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ ಇದ್ದ ಅಡೆತಡೆಗಳನ್ನು ಬಗೆಹರಿಸಿ, ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದೆ. ಇಲಾಖಾ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ತಂಡ ರಚಿಸಿ ಯಾರಿಗೂ ತೊಂದರೆ ಆಗದಂತೆ ಎಚ್ಚರವಹಿಸಿ 66 ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ಪದೋನ್ನತಿ ಆದೇಶ ಹೊರಡಿಸಲಾಗಿದೆ ಎಂದರು.
ಇಲಾಖಾ ಆಡಳಿತ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಇದ್ದ, ತೊಡಕುಗಳನ್ನು ನಿವಾರಿಸಿ ಪದೋನ್ನತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. 2012ರಲ್ಲಿ ಇಲಾಖೆ ಪುನರ್ ರಚನೆಯಾಗಿ, 2017ರಿಂದ ವೃಂದ ಮತ್ತು ನೇಮಕಾತಿ ನಿಯಮ ಅನ್ವಯವಾಗಿರುವುದರಿಂದ, ಆ ಅವಧಿಗೆ 10, 15, 20, 25 ವರ್ಷಗಳ ಸೇವೆ ಸಲ್ಲಿಸಿದ ಅರ್ಹ ಪಶುವೈದ್ಯಾಧಿಕಾರಿಗಳಿಗೆ ಕಾಲಮಿತಿ ವೇತನ ಬಡ್ತಿ ಹಾಗೂ ಇನ್ನಿತರೆ ಆರ್ಥಿಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಪ್ರತ್ಯೇಕವಾಗಿ ಕ್ರಮಕೈಗೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.
2017ರ ನಂತರ ಹೊಸ ವೃಂದ ನೇಮಕಾತಿ ಅನ್ವಯ ಕಾಲಮಿತಿ ಬಡ್ತಿ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ತಾಲೂಕು ಮಟ್ಟದ ಆಡಳಿತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಜೇಷ್ಠತಾ ಆಧಾರದ ಮೇಲೆ 345 ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ಈಗಾಗಲೇ ಗುರುತಿಸಿರುವ ಪ್ರಮುಖ ಹುದ್ದೆಗಳಿಗೆ ಇಲಾಖಾ ಪುನರ್ ರಚನೆ ಅನ್ವಯ ಸ್ಥಾನಪಲ್ಲಟಗೊಳಿಸಲಾಗುವುದು ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.