ಬಸವಕಲ್ಯಾಣ: ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ದಿ. ಶಾಸಕ ಬಿ. ನಾರಾಯಣರಾವ್ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ದಿ. ನಾರಾಯಣರಾವ್ ಸ್ಮಾರಕ ನಿರ್ಮಾಣ ಮಾಡಲು ಸಿದ್ದರಾಮಯ್ಯ ಸಲಹೆ ಇಲ್ಲಿನ ಸಸ್ತಾಪೂರ ಬಂಗ್ಲಾ ಬಳಿಯ ದಿ. ಶಾಸಕ ಬಿ.ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಕಮಿಟಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಕಾಳಜಿ ವಹಿಸಿ ಬಿ.ನಾರಾಯಣರಾವ್ ಅವರ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಕಾಂಗ್ರೆಸ್ ಶಾಸಕರಿಗೆ ಸೂಚಿಸಿದರು.
ಬಿ.ನಾರಾಯಣರಾವ್ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ತೆರಳುತ್ತಾರೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ. ಕೊರೊನಾ ಕಾಲದಲ್ಲಿ ಜನರಿಗೆ ಯಾವ ಶಾಸಕರು ಮಾಡದಂತಹ ಸಹಾಯ, ಸಹಕಾರ ಅವರು ಮಾಡಿದ್ದರು. ಆದರೆ ವಿಧಿಯಾಟ ಬೇರೆ. ಕೊರೊನಾಗೆ ಬಲಿಯಾಗಿ ನಮ್ಮನ್ನು ಬಿಟ್ಟು ಹೋದರು ಎಂದು ಭಾವುಕರಾಗಿ ನುಡಿದರು.
ಕಳೆದ 40 ವರ್ಷಗಳಿಂದ ನನ್ನ ಒಡನಾಡಿಯಾಗಿದ್ದ ನಾರಾಯಣರಾವ್, ಬಡವರು, ನಿರ್ಗತಿಕರು ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಪರ ಧ್ವನಿಯಾಗಿ ನಿರಂತರ ಹೋರಾಟ ನಡೆಸುತಿದ್ದರು. ಜೀವನದಲ್ಲಿ ತಾವು ವಿಧಾನಸಭೆ ಪ್ರವೇಶಿಸಬೇಕು ಎನ್ನುವ ಕನಸು ಕಟ್ಟಿಕೊಂಡು ಜನ ಸೇವೆಯಲ್ಲಿ ತೊಡಗಿದ್ದರು. ಅವರ ಆಸೆಯಂತೆ 2014ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಆದರೆ ಪರಾಭವಗೊಂಡರು. ಮತ್ತೆ 2018ರಲ್ಲಿ ಕೆಲವರ ವಿರೋಧದ ನಡುವೆಯೂ ಪುನಃ ಟಿಕೆಟ್ ನೀಡಿದ ಕಾರಣ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.
ಬಸವ ತತ್ವವನ್ನು ಬರಿ ಬಾಯಿ ಮಾತಿನಲ್ಲಿ ಹೇಳಿ ಅದನ್ನು ಅಳವಡಿಸಿಕೊಳ್ಳದ ಇಂದಿನ ಬಹುತೇಕ ಜನರಿಗೆ ಬಿ.ನಾರಾಯಣರಾವ್ ಮಾದರಿಯಾಗಿದ್ದರು. ಬವಣ್ಣನವರ ವಿಚಾರಗಳನ್ನು ಅರಿತು ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡಿದ್ದ ಅವರು, ಶರಣರ ನಾಡಿನ ಶಾಸಕರಾಗಿ ಆಯ್ಕೆಯಾಗಿದ್ದು ನಮಗೆ ಎಲ್ಲಿಲ್ಲದ ಸಂತಸ ತಂದು ಕೊಟ್ಟಿತ್ತು. ಬಸವ ಭೂಮಿಗೆ ಯೋಗ್ಯವಾದ ವ್ಯಕ್ತಿ ಆಯ್ಕೆಯಾಗಿದ್ದಾನೆ ಎನ್ನುವ ಭಾವನೆ ನಮ್ಮಲ್ಲಿ ಮೂಡಿತ್ತು ಎಂದು ಸ್ಮರಿಸಿದರು.