ಬೀದರ್:ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಲು ಮುಂದಾಗಿದ್ದ ಗ್ರಾಮಸ್ಥರ ಮನವೊಲಿಸಿ ವೋಟಿಂಗ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾ ಪಂಚಾಯತ್ ಸಿಇಒ ಮಹಾಂತೇಶ ಬೀಳಗಿ ಈಗ ಜನರಿಂದ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿದ್ದಾರೆ.
ಹೌದು, ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಸಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರನಳ್ಳಿ ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಸಿಇಒ ಬೀಳಗಿ. ಕೆಲಸ ಮಾಡಿಸಿ ಮಾತು ಉಳಿಸಿಕೊಂಡಿರುವ ಅವರು ದಶಕಗಳಿಂದ ಸಮಸ್ಯೆಗಳಲ್ಲಿ ನರಳಾಡ್ತಿದ್ದ ಜನರ ನೋವಿಗೆ ಮುಕ್ತಿ ಕಲ್ಪಿಸಿದ್ದಾರೆ. ಅಧಿಕಾರಿಗಳನ್ನು ಗ್ರಾಮಕ್ಕೆ ಕರೆದೊಯ್ದು ಜನಸ್ಪಂದನ ಸಭೆ ನಡೆಸಿದರಲ್ಲದೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಹಾಗೂ ಸ್ವಚ್ಛತಾ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ.
ಕೊಟ್ಟ ಮಾತು ಉಳಿಸಿಕೊಂಡ ಸಿಇಓ ಮಹಾಂತೇಶ ಬಿಳಗಿ ಏನಾಗಿತ್ತು:
ಕೂಡು ರಸ್ತೆ ಇಲ್ಲದೆ ಪರದಾಡುತ್ತಿರುವ ನಮ್ಮ ಗೋಳು ಯಾರು ಕೇಳ್ತಿಲ್ಲ. ಕುಡಿಯಲಿಕ್ಕೆ ಹನಿ ನೀರಿಲ್ಲದೆ ಪರದಾಡಿದರು ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ನಮ್ಮತ್ತ ತಿರುಗಿ ನೋದ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವ್ ಯಾಕ್ ವೋಟ್ ಹಾಕಬೇಕೆಂದು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರು.
ಚುನಾವಣೆ ನಂತರ ಪರಿಹಾರ:
ಚುನಾವಣಾ ಬಹಿಷ್ಕಾರದ ವಿಷಯ ತಿಳಿದಿದ್ದ ಜಿ.ಪಂ ಸಿಇಒ ಮಹಾಂತೇಶ ಬೀಳಗಿ ಅವರು, ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರಿಗೆ ಚುನಾವಣೆ ನಂತರ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡುವ ಮೂಲಕ ಮನವೊಲಿಸಿದ್ದರು. ಅವರ ಮಾತು ಕೇಳಿ ಗ್ರಾಮಸ್ಥರು ಮತದಾನ ಮಾಡಿದ್ರು.
ಆದ್ರೆ ಪ್ರತಿ ಬಾರಿಯಂತೆ ಈ ಬಾರಿ ಗ್ರಾಮಸ್ಥರಿಗೆ ನಿರಾಸೆಯಾಗಿಲ್ಲ. ಯಾಕಂದ್ರೆ ಕೊಟ್ಟ ಮಾತಿನಂತೆ ಸಿಇಒ ಅವರು ಕುರನಳ್ಳಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಗುರುವಾರ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಣೆ ಮಾಡಿ ಕೂಡು ರಸ್ತೆ ಮುಂದಿನ ಆರು ತಿಂಗಳಲ್ಲಿ ಮಾಡಿ ಮುಗಿಸುವುದಾಗಿ ಭರವಸೆ ನೀಡಿದರು. ಇದರಿಂದ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ. ಕೊನೆಗೂ ತಮ್ಮ ಮನವಿಗೆ ಸ್ಪಂದಿಸಿದ್ದಕ್ಕೆ ಜನ ಧನ್ಯವಾದ ತಿಳಿಸಿದ್ದಾರೆ.