ಬೀದರ್:ದೇಶ ಕಾಯುವ ಯೋಧನ ಕುಟುಂಬವೊಂದು ಕತ್ತಲೆಯಲ್ಲಿ ಜೀವನ ನಡೆಸುತ್ತಿರುವ ಮನಕಲುಕುವ ಘಟನೆ ಕಮಲನಗರ ತಾಲೂಕಿನ ತೋರಣಾ ಗ್ರಾಮದಲ್ಲಿ ಕಂಡು ಬಂದಿದೆ.
ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ ಕಮಲನಗರ ತಾಲೂಕಿನ ತೋರಣಾ ಗ್ರಾಮದ ಕಾಳಿದಾಸ ಗೌಳಿ ಎಂಬ ಯೋಧರ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಅವರ ಕುಟುಂಬ ಜೀವನ ಸಾಗಿಸುತ್ತಿದೆ. ವಿದ್ಯುತ್ ಸಂಪರ್ಕ ಕೊಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸಾಲು ಸಾಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಕೆಲಸಕ್ಕೆಂದು ಹೋದರೆ ನಮ್ಮ ಅಪ್ಪ, ಅಮ್ಮ ಮಾತ್ರ ಇರುತ್ತಾರೆ. ಈ ವೇಳೆ ತುಂಬಾನೆ ತೊಂದರೆಯಾಗುತ್ತದೆ ಅಂತಾರೆ ಯೋಧ ಕಾಳಿದಾಸ.
ಕಾಳಿದಾಸ ಗೌಳಿ ಭಾರತೀಯ ಸಶಸ್ತ್ರ ಸೀಮಾ ಪಡೆಯ 65 ನೇ ಬಟಾಲಿಯನ್ನ ಬಿಹಾರ್ ರಾಜ್ಯದಲ್ಲಿ ಸೇವೆಯಲ್ಲಿದ್ದಾರೆ. ಇವರ ತಾಯಿ, ತಂದೆ ತೋರಣಾ ಗ್ರಾಮದ ಹೊರ ವಲಯದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಯೋಧ ದೇಶ ಕಾಯುವ ಕೆಲಸಕ್ಕೆ ಹೋದ್ರೆ ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರ ಇರ್ತಾರೆ. ಊರಿಗೆಲ್ಲಾ ಕರೆಂಟ್ ಕೊಟ್ಟಿದ್ದಿರಿ, ನಮ್ಮ ಮನೆಗೂ ಸಂಪರ್ಕ ಕೊಡಿ ಎಂದು ಎರಡು ವರ್ಷಗಳಿಂದ ಮನವಿ ಸಲ್ಲಿಸಿದರೂ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಯೋಧ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಜೆಯಲ್ಲಿ ಸ್ವಗ್ರಾಮಕ್ಕೆ ಬಂದಾಗಲೆಲ್ಲ ಜೆಸ್ಕಾಂ ಇಲಾಖೆ ಅಧಿಕಾರಿಗಳ ಕಚೇರಿ ಬಾಗಿಲಿನಲ್ಲಿ ಕುಳಿತು ಮನವಿಗಳನ್ನು ನೀಡಿ ಸಾಕಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳಿಗೂ ನನ್ನ ಗೋಳನ್ನು ತೋಡಿಕೊಂಡಿದ್ದೇನೆ. ಆದ್ರೆ ಯಾವ ಪ್ರಯೋಜನ ಕೂಡ ಆಗಿಲ್ಲ. ತಕ್ಷಣ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ನೀಡಿ, ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡುವಂತೆ ಕಾಳಿದಾಸ ಮನವಿ ಮಾಡಿದ್ದಾರೆ.