ಕರ್ನಾಟಕ

karnataka

ETV Bharat / state

ಡೆಂಗ್ಯೂ ಮಹಾಮಾರಿಗೆ ತತ್ತರಿಸಿದ ಜನ: ನಿದ್ರಾವಸ್ಥೆಗೆ ಜಾರಿದ ಬಸವ ಕಲ್ಯಾಣ ತಾಲೂಕು ಆಡಳಿತ! - ತಾಲೂಕು ಆರೋಗ್ಯ ಇಲಾಖೆ

ಶಂಕಿತ ಡೆಂಗ್ಯೂ ಮಹಾಮಾರಿಗೆ ತತ್ತಾಗಿ ಅದೆಷ್ಟೋ ಜನ ಹೈರಾಣಾಗುತ್ತಿದ್ದರೂ, ಕಾಯಿಲೆ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಬಸವ ಕಲ್ಯಾಣದ ಸ್ಥಳೀಯ ಆಡಳಿತ ನಿದ್ರಾವಸ್ಥೆಗೆ ಜಾರಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಡೆಂಘೀ ಜ್ವರ

By

Published : Oct 10, 2019, 11:06 AM IST

Updated : Oct 10, 2019, 4:15 PM IST

ಬಸವಕಲ್ಯಾಣ:ಶಂಕಿತ ಡೆಂಗ್ಯೂ ಮಹಾಮಾರಿ ಕಾಯಿಲೆಗೆ ತತ್ತಾಗಿ ಅದೆಷ್ಟೋ ಜನ ಹೈರಾಣ ಆಗುತ್ತಿದ್ದರೂ, ಕಾಯಿಲೆ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ನಿದ್ರಾವಸ್ಥೆಗೆ ಜಾರಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ನಗರ ಸೇರಿದಂತೆ ತಾಲೂಕಿನ ವಿವಿಧಡೆ ಹತ್ತಾರು ಸಂಖ್ಯೆಯಲ್ಲಿ ಜನ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ದಿನದಿಂದ ದಿನಕ್ಕೆ ಇದಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಷ್ಟಾದರೂ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಇಲ್ಲಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ತಾಲೂಕು ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬೆರಳೆಣಿಕೆಯಷ್ಟು ರೋಗಿಗಳಲ್ಲಿ ಮಾತ್ರ ಶಂಕಿತ ಡೆಂಗ್ಯೂ ವೈರಾಣು ಪತ್ತೆಯಾಗಿದೆ. ಇನ್ನು ಜ್ವರಕ್ಕೆ ತುತ್ತಾದವರ ರಕ್ತದ ಮಾದರಿ ಸಂಗ್ರಹಿಸಿ ಉನ್ನತ ಹಂತದ ತಪಾಸಣೆಗಾಗಿ ಕಳಿಸಲಾಗಿತ್ತು. ಆದರೆ ಡೆಂಗ್ಯೂ ವೈರಾಣು ಇಲ್ಲ ಎನ್ನುವ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾದವರು ನಗರದ ಪಾಟೀಲ ಆಸ್ಪತ್ರೆ, ಭುರಳೆ, ರೀಫಾ ಆಸ್ಪತ್ರೆ, ರೆಡ್ಡಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಜ್ವರದ ತೀವ್ರತೆಗೆ ತುತ್ತಾದ ಹಲವರು ನೆರೆಯ ಮಹಾರಾಷ್ಟ್ರದ ಉಮರ್ಗಾ ಹಾಗೂ ಸೋಲಾಪೂರ ಹಾಗೂ ಹೈದ್ರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ನಗರ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಬಗ್ಗೆ ವಿವರ ಕಲೆ ಹಾಕಿ ಅಗತ್ಯ ಚಿಕಿತ್ಸೆಗೆ ಆರೋಗ್ಯ ಅಧಿಕಾರಿಗಳು ಮುಂದಾಗಬೇಕಿದೆ. ನಿರ್ಲಕ್ಷ ವಹಿಸಿದಲ್ಲಿ ಮತ್ತಷ್ಟು ರೋಗ ಉಲ್ಬಣಗೊಂಡು ಇಲಾಖೆ ಕೈಮೀರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಶಂಕಿತ ಡೆಂಗ್ಯೂ ಜ್ವರ ಪತ್ತೆಯಾದ ಕೆಲ ಪ್ರದೇಶಗಳಲ್ಲಿಯ ಜನರನ್ನು ಭೇಟಿಯಾಗಿ ಜಾಗೃತಿ ಮೂಡಿಸಲಾಗಿದೆ. ಆದರೆ ನಗರಸಭೆಯಿಂದ ಮನೆ-ಮನೆಗಳಿಗೆ ಸರಬರಾಜುಗೊಳಿಸಲಾಗುತ್ತಿರುವ ನೀರಿನಲ್ಲಿಯೇ ಡೆಂಗ್ಯೂ ವೈರಾಣು ಹರಡುವ ಹುಳುಗಳು ಬರುತ್ತಿವೆ (ಲಾರ್ವಾ) ಎಂದು ಜನರು ಗೋಳು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಸಭೆ ಅಧಿಕಾರಿಗಳಿಗೆ ಪತ್ರ ಬರೆದರು ಪ್ರಯೋಜನವಾಗಿಲ್ಲ. ಬುಧವಾರ ಮತ್ತೆ ಪತ್ರ ಬರೆಯಲಾಗುವುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Oct 10, 2019, 4:15 PM IST

ABOUT THE AUTHOR

...view details