ಬಸವಕಲ್ಯಾಣ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅಕ್ಸಿಜನ್, ಇಂಜೆಕ್ಷನ್ ಸೇರಿದಂತೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ಸೂಚಿಸಿದ್ದಾರೆ.
ನಗರದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ಬಳಿಕ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ ಅವರು, ಅಸ್ಪತ್ರೆಯಲ್ಲಿ ಲಭ್ಯವಿರುವ ಕೋವಿಡ್ ಬೆಡ್, ಆಕ್ಸಿಜನ್, ಔಷಧಗಳ ಬಗ್ಗೆ ಪ್ರತಿದಿನ ಹೊರಗಡೆ ಬೋರ್ಡ್ ಮೇಲೆ ಬರೆಯಬೇಕು. ಇದರಿಂದ ರೋಗಿಗಳಿಗೆ ಧೈರ್ಯ ಬರುತ್ತದೆ ಎಂದು ಸಲಹೆ ನೀಡಿದರು.
ಸೋಂಕಿತರಿಗೆ ನಿಮ್ಮಲ್ಲಿಯೇ ಚಿಕಿತ್ಸೆ ನೀಡಿ, ಬೇರೆ ಆಸ್ಪತ್ರೆಗೆ ರೆಫರ್ ಮಾಡಬೇಡಿ. ಕೊರೊನಾ ಮಹಾಮಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ. ಖಾಸಗಿಯಲ್ಲಿ ಬಡವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚು. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು. ಏನಾದರೂ ಅವಶ್ಯಕತೆ ಇದ್ದಲ್ಲಿ ನನಗೆ ಕರೆ ಮಾಡಿದರೆ ಸಹಾಯ ಮಾಡಲಾಗುವುದು ಎಂದು ವೈದ್ಯರಿಗೆ ತಿಳಿಸಿದರು.