ಬೀದರ್:ದಿನಕ್ಕೆ 600 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವ ಮೋಲ್ಕ್ಯುಲರ್ ವೈರಾಲಜಿ ಲ್ಯಾಬೊರೇಟರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೋವಿಡ್-19 ವೈರಾಣು ಪತ್ತೆ ಹಚ್ಚಲು ಕಲಬುರಗಿ ಹಾಗೂ ಬೆಂಗಳೂರು ಪ್ರಯೋಗಾಲಯಕ್ಕೆ ಮೊದಲು ಸ್ಯಾಂಪಲ್ ಕಳುಹಿಸಿ ಎರಡು ದಿನಗಳವರೆಗೆ ಕಾಯಬೇಕಾಗಿತ್ತು. ಆದರೀಗ ನಮ್ಮಲ್ಲೇ ಲ್ಯಾಬ್ ಆಗಿದೆ. ಇದರಿಂದ ಸೋಂಕು ಪತ್ತೆ ಸುಲಭವಾಗಲಿದೆ ಎಂದರು.
ಬೀದರ್‌ನಲ್ಲಿ ಕೊರೊನಾ ಪ್ರಯೋಗಾಲಯ ಉದ್ಘಾಟಿಸಿದ ಸಚಿವ ಪ್ರಭು ಚವ್ಹಾಣ್ ಬಳಿಕ ಕಂಟೇನ್ಮೆಂಟ್ ಪ್ರದೇಶ ತಾಲೂಕಿನ ಮುಧೋಳ ಗ್ರಾಮವನ್ನು ಪರಿಶೀಲನೆ ನಡೆಸಿದರು. ಕಂಟೇನ್ಮೆಂಟ್ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ನಿಲ್ಲಿಸಬೇಕು. ಜೊತೆಗೆ ಆಶಾ, ಅಂಗನವಾಡಿ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಸರಬರಾಜು ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಬೀಜ ವಿತರಣಾ ಕೇಂದ್ರಕ್ಕೆ ಚಾಲನೆ:
ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣಾ ಕೇಂದ್ರಕ್ಕೆ ಸಚಿವರು ಚಾಲನೆ ನೀಡಿದರು. ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿರುವ ಸೊಯಾಬಿನ್, ತೊಗರಿ, ಜೋಳ, ಉದ್ದು, ಹೆಸರು ಬೀಜಗಳನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳಿಗೆ ಪ್ರಭು ಚವ್ವಾಣ್ ಸೂಚನೆ ಕೊಟ್ಟರು.