ಬೀದರ್:ಇಲ್ಲಿನ ಐತಿಹಾಸಿಕ ಮೊಹಮದ್ ಗವಾನ್ ಮದರಸಾ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದಲ್ಲದೇ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಪೂಜೆ ನೆರವೇರಿಸಿದ ಆರೋಪಕ್ಕೆ ಸಂಬಂಧ ಪಟ್ಟಂತೆ 9 ಮಂದಿ ವಿರುದ್ಧ ಬೀದರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಬುಧವಾರ ತಡ ರಾತ್ರಿ ದಸರಾ ಮೆರವಣಿಗೆಯಲ್ಲಿದ್ದ ನೂರಾರು ಮಂದಿಯ ಗುಂಪೊಂದು ಜೈ ಶ್ರೀ ರಾಮ್ ಘೋಷಣೆ ಕೂಗಿ ಮೊಹಮದ್ ಗವಾನ್ ಮದರಸಾ ಆವರಣದ ಬೀಗ ಮುರಿದು ಅಕ್ರಮವಾಗಿ ಪ್ರವೇಶಿಸಿತ್ತು. ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಬೀದರ್ ಪಟ್ಟಣ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ಬುಧವಾರ ಸಂಜೆ ಗುಂಪು ಮದರಸಾದ ಗೇಟ್ಗಳ ಬೀಗ ಮುರಿದು ಒಳಗೆ ಪ್ರವೇಶಿಸಿತು. ನಂತರ ಕಟ್ಟಡದ ಒಂದು ಮೂಲೆಗೆ ತೆರಳಿ ಪೂಜೆ ನೆರವೇರಿಸಿತು. ಘಟನಾ ಸ್ಥಳದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಟ್ಟಡದ ಒಳಗೆ ಪ್ರವೇಶಿಸಲೆಂದು ಮೆಟ್ಟಿಲ ಮೇಲೆ ದೊಡ್ಡ ಗುಂಪು ನಿಂತಿರುವುದು ಕಾಣಿಸುತ್ತದೆ.