ಬೀದರ್ :ರೈತರೊಂದಿಗೆ ಎಳ್ಳು ಅಮಾವಾಸ್ಯೆ ಆಚರಿಸಿದ ಶಾಸಕ ಪ್ರಭು ಚವ್ಹಾಣ್ ಜೋಕಾಲಿ ಆಡಿ ಖುಷಿ ಪಟ್ಟಿದ್ದಾರೆ. ಬೆಳಗ್ಗೆ ಔರಾದನ ತಮ್ಮ ಗ್ರಾಮದಲ್ಲಿನ ಕೃಷಿ ಜಮೀನಿಗೆ ತೆರಳಿ, ಭೂತಾಯಿಗೆ ಪೂಜೆ ನೆರವೇರಿಸಿ, ಚರಗ ಚಲ್ಲುವ ಮೂಲಕ ನಮನ ಸಲ್ಲಿಸಿದರು. ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಭೂತಾಯಿ ಸಂಪನ್ನವಾಗಿರಲಿ, ರೈತರ ಬದುಕು ಸಂತೋಷದಿಂದ ಕೂಡಿರಲೆಂದು ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ, ಶಾಸಕರು ಹೊಲದಲ್ಲಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಉಯ್ಯಾಲೆಯಾಡಿ ಖುಷಿ ಪಟ್ಟರು. ಬಳಿಕ ಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ - ಎಳ್ಳಿನ ಹೋಳಿಗೆಯನ್ನು ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಸೇವಿಸಿದರು. ಅಲ್ಲದೇ ವಿವಿಧ ಗ್ರಾಮಗಳಲ್ಲಿ ಎಳ್ಳು ಅಮಾವಾಸ್ಯೆ ಆಚರಣೆಯನ್ನು ರೈತರು ತಮ್ಮ ತಮ್ಮ ಹೊಲ, ಜಮೀನಿಗಳಿಗೆ ಹೋಗಿ ಭಕ್ತಿಯಿಂದ ಆಚರಿಸಿದರು.
ಬಳಿಕ ಮಾತನಾಡಿದ ಪ್ರಭು ಚವ್ಹಾಣ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನದಂದು ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ರೈತರೊಂದಿಗೆ ಆಚರಿಸುತ್ತೇನೆ. ಭೂತಾಯಿಯನ್ನು ಪೂಜಿಸಿ ರೈತರ ಒಳಿತಿಗಾಗಿ ಬೇಡಿಕೊಳ್ಳುತ್ತೇನೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.