ಬೀದರ್:ಮೂವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಆಘಾತದಲ್ಲಿದ್ದ ರೈತನ ಕುಟುಂಬದ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಕುಟುಂಬಕ್ಕೆ ಎಲ್ಲ ಸಹಾಯ ಮಾಡುವ ಭರವಸೆಯನ್ನೂ ನೀಡಿದರು.
ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರವಾಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದರು. ಘಟನೆಯ ಕುರಿತು ಕುಟುಂಬದವರಿಂದ ಮಾಹಿತಿ ಪಡೆದುಕೊಂಡ ಸಚಿವರು, ಇಡೀ ಕುಟುಂಬಕ್ಕೆ ಆಧಾರ ಸ್ಥಂಬದಂತಿದ್ದ ಮಕ್ಕಳನ್ನು ಕಳೆದುಕೊಂಡು ತಾವು ದುಃಖದಲ್ಲಿದ್ದೀರಿ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿ ಧೈರ್ಯ ತುಂಬಿದರು.
ಮೃತ ಸಹೋದರರ ಕುಟುಂಬಕ್ಕೆ ಸಚಿವರ ಸಾಂತ್ವನ ಈ ವೇಳೆ ಮಾತನಾಡಿದ ಸಚಿವರು, ಮೂವರು ಮಕ್ಕಳು ನೀರಿನಲ್ಲಿ ಜಲಸಮಾಧಿಯಾದ ವಿಷಯ ತಿಳಿದು, ನನ್ನ ಮನಸ್ಸಿಗೆ ನೋವಾಯಿತು. ಈ ಘಟನೆಯಿಂದ ಈ ಗ್ರಾಮಸ್ಥರಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರು ದುಃಖದಲ್ಲಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಇನ್ನು ಕುಟುಂಬದವರಿಗೆ ವೈಯಕ್ತಿಕವಾಗಿ 51,000 ರೂ.ಗಳನ್ನು ನೀಡಿದ ಸಚಿವರು, ಬಡ ರೈತ ಕುಟುಂಬಕ್ಕೆ ಆಸರೆಯಾಗಲೆಂದು, ಎರಡು ಆಕಳುಗಳನ್ನು ಕೊಡುವುದಾಗಿ ತಿಳಿಸಿದರು. ಕುಟುಂಬದಲ್ಲಿದ್ದ ಹೆಣ್ಣು ಮಗಳ ವಿವಾಹದ ಜವಾಬ್ದಾರಿ ಕೂಡ ವಹಿಸಿಕೊಳ್ಳುವುದಾಗಿ ಇದೇ ವೇಳೆ ಅವರು ತಿಳಿಸಿದರು.