ಬೀದರ್:ಮುಂಬೈನಿಂದ ಮುಧೋಳ(ಕೆ)ಗ್ರಾಮಕ್ಕ ವಾಪಸಾದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಔರಾದ್ ಪಟ್ಟಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಔರಾದ್ನಲ್ಲಿ ನಾಲ್ವರಿಗೆ ಪಾಸಿಟಿವ್: ಸಚಿವ ಪ್ರಭು ಚವ್ಹಾಣ ತುರ್ತು ಸಭೆ - corona positive cases in ourad
ಬೀದರ್ನ ಔರಾದ್ ತಾಲೂಕಿಗೂ ಕೊರೊನಾ ಸೋಂಕು ಕಾಲಿಟ್ಟ ಹಿನ್ನೆಲೆ ಸಚಿವ ಪ್ರಭು ಚವ್ಹಾಣ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಮೊದಲ ಬಾರಿಗೆ ಮಹಾರಾಷ್ಟ್ರದಿಂದ ವಾಪಸಾದ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಮುಧೋಳ ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಬೇಕು. ಸುತ್ತಮುತ್ತಲಿನ ಹಳ್ಳಿಗಳನ್ನು ಕೂಡ ತೀವ್ರವಾಗಿ ಪರಿಶೀಲನೆಯಲ್ಲಿಟ್ಟು ಸ್ಯಾನಿಟೈಸರ್, ಮಾಸ್ಕ್ ಬಳಕೆ ಹಾಗೂ ಗ್ರಾಮ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದರು.
ಮೂರು ತಿಂಗಳ ಕಾಲ ತಾಲೂಕಿನಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಷ್ಟಾದರೂ ಹೊರಗಿನಿಂದ ಬಂದವರಿಂದ ಸೋಂಕು ತಗುಲಿದೆ ಎಂದರು. ಮಹಾರಾಷ್ಟ್ರದಿಂದ ಬರುವ ಜನರ ಮೇಲೆ ಚೆಕ್ಪೋಸ್ಟ್ಗಳಲ್ಲಿ ತೀವ್ರವಾದ ನಿಗಾವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತನ ಸಹಿಸಲ್ಲ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡುವುದು ಅನಿವಾರ್ಯ ಎಂದರು.
ಗಡಿ ಭಾಗದ ಕಮಲನಗರ ಹಾಗೂ ಔರಾದ್ ತಾಲೂಕಿನ ಎರಡು ಗ್ರಾಮಗಳಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ಕ್ವಾರಂಟೈನ್ ಆಗಿರುವ ವ್ಯಕ್ತಿಗಳ ಗಂಟಲು ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದಮೇಲೆಯೇ ಅವರನ್ನು ಮನೆಗೆ ಕಳಿಸಬೇಕು ಎಂದು ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.