ಕರ್ನಾಟಕ

karnataka

ETV Bharat / state

ಔರಾದ ಪಟ್ಟಣವನ್ನು ಪ್ರವಾಸಿ ತಾಣವಾಗಿಸಲು ಪಣ: ಸಚಿವ ಪ್ರಭು ಚವ್ಹಾಣ - ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ

ಜನತೆಯ ಬಹುದಿನಗಳ ಬೇಡಿಕೆಯಾದ ಉದ್ಯಾನವನ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಗಿದೆ. ಔರಾದ ಪಟ್ಟಣ ಮತ್ತು ಸುತ್ತಲಿನ ಗ್ರಾಮಸ್ಥರಿಗೆ ಸಾಕಷ್ಟು ನೆರವಾಗಲಿರುವ ಈ ಉದ್ಯಾನ ನಿರ್ಮಾಣ ಕೆಲಸಕ್ಕೆ ಸ್ಥಳೀಯರು ಸಹಕರಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಮನವಿ ಮಾಡಿದರು.

Minister Prabhu Chavan
ಸಚಿವ ಪ್ರಭು ಚವ್ಹಾಣ

By

Published : Dec 9, 2022, 8:17 PM IST

Updated : Dec 9, 2022, 9:22 PM IST

ಬೀದರ್​:ಔರಾದ ಪಟ್ಟಣದಲ್ಲಿ ಮಾದರಿ ಉದ್ಯಾನವನ ನಿರ್ಮಿಸಲಾಗುತ್ತಿದ್ದು, ಬೇರೆ ಭಾಗಗಳ ಜನತೆ ಸ್ಥಳ ವೀಕ್ಷಣೆಗೆ ಔರಾದಗೆ ಬರುವಂತಹ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ತಿಳಿಸಿದರು. ಬೀದರ್​ ಪ್ರಾದೇಶಿಕ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಲಯ ಔರಾದ ವತಿಯಿಂದ ಔರಾದ ಪಟ್ಟಣದ ಮುಂಗನಾಳ ರಸ್ತೆಯಲ್ಲಿ ಡಿಸೆಂಬರ್ 9ರಂದು ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಔರಾದ ಪಟ್ಟಣದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಬೇಕೆಂಬುದು ನನ್ನ ಬಹುದಿನಗಳ ಅಭಿಲಾಷೆಯಾಗಿತ್ತು. ಸಾಕಷ್ಟು ವರ್ಷಗಳಿಂದ ನಿರಂತರ ಪ್ರಯತ್ನಪಟ್ಟು ಈ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಸರ್ಕಾರ 2 ಕೋಟಿ ರೂ ಮಂಜೂರಾತಿ ನೀಡಿದ್ದು ಮೊದಲ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆ‌ ಮಾಡಿದೆ. ಈ ಹಣ ಬಳಕೆಯಾದ ನಂತರ ಬಾಕಿ‌ ಅನುದಾನ ಬಿಡುಗಡೆಯಾಗುತ್ತದೆ.

ಮೊದಲ ಹಂತದಲ್ಲಿ 600 ಗಿಡಗಳನ್ನು ನೆಡಲಾಗುತ್ತದೆ. ಪಾದಚಾರಿ ಮಾರ್ಗ, ಮಕ್ಕಳ ಆಟಕ್ಕೆ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಕೆಕೆಆರ್​ಡಿಬಿ ಒಳಗೊಂಡು ವಿವಿಧ ಮೂಲಗಳಿಂದ ಅನುದಾನ ಬಳಸಿಕೊಂಡು ಎಲ್ಲ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ಉದ್ಯಾನವನ ನಿರ್ಮಿಸಲಾಗುತ್ತದೆ. ಬೇರೆ ಬೇರೆ ಭಾಗದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪಿಕ್‌ನಿಕ್​ಗಾಗಿ ಔರಾದ ಪಟ್ಟಣಕ್ಕೆ ಆಗಮಿಸುವಂತಹ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.

ಸಚಿವ ಪ್ರಭು ಚವ್ಹಾಣ

ಔರಾದ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಪಟ್ಟಣದ ಸೌಂದರ್ಯೀಕರಣಕ್ಕಾಗಿ ಮಹತ್ತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಪಿಎಂಸಿ ವೃತ್ತದಿಂದ ತಹಶೀಲ್​ ಕಛೇರಿವರೆಗೆ ಬೀದಿ ದೀಪಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಜನತೆಯ ಬಹುದಿನಗಳ ಬೇಡಿಕೆಯಾದ ಉದ್ಯಾನವನ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಗಿದೆ. ಔರಾದ ಪಟ್ಟಣ ಮತ್ತು ಸುತ್ತಲಿನ ಗ್ರಾಮಸ್ಥರಿಗೆ ಸಾಕಷ್ಟು ನೆರವಾಗಲಿರುವ ಈ ಉದ್ಯಾನ ನಿರ್ಮಾಣ ಕೆಲಸಕ್ಕೆ ಸ್ಥಳೀಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಉತ್ತಮ ಪರಿಸರಕ್ಕಾಗಿ ಅರಣ್ಯ ಸಾಕಷ್ಟು ಪ್ರಾಮುಖ್ಯತೆ ವಹಿಸುತ್ತದೆ. ಹಾಗಾಗಿ ಮುಂಚೆಯಿಂದಲೂ ಗಿಡ-ಮರಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಎಲ್ಲ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳು ಮತ್ತು ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾಜಿರಾವ ಕಾಳೆ, ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಸಂತೋಷ ಪೋಕಲವಾರ್, ಬೀದರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ತಹಸೀಲ್ದಾರ ಅರುಣಕುಮಾರ ಕುಲಕರ್ಣಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಕುಮಾರ ಘಾಟೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಶಿವಕುಮಾರ ಗಜರೆ, ಉಪ ವಲಯ ಅರಣ್ಯ ಅಧಿಕಾರಿ ಹಾವಪ್ಪ, ಪ್ರವೀಣ ಮೋರೆ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಇದನ್ನು ಓದಿ:ಏನಿದು ಆಯುಷ್ಮಾನ್ ಭಾರತ್ ಯೋಜನೆ? ; ಅರ್ಹರು ಯಾರು?

Last Updated : Dec 9, 2022, 9:22 PM IST

ABOUT THE AUTHOR

...view details