ಬೀದರ್:ದೇಶದಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ರಫ್ತು ಕುರಿತಂತೆ ಚರ್ಚಿಸಲು ಇದೇ ಸೆ. 22 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಉದ್ದು ಮತ್ತು ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಮಾರಿ ಕೋವಿಡ್ ಮಧ್ಯೆ ಕೂಡ ದೇಶದಲ್ಲಿ ಕೃಷಿ ಉತ್ಪನ್ನಗಳಲ್ಲಿ ಹೆಚ್ಚಳ ಕಂಡು ಬಂದಿದೆ. ಹೀಗಾಗಿ ಮಾರುಕಟ್ಟೆ ವ್ಯವಸ್ಥೆ ಸುಧಾರಿಸಲು ದೇಶದ ಉತ್ಪನ್ನಗಳು ವಿದೇಶಕ್ಕೆ ರಫ್ತು ಮಾಡುವ ಕುರಿತು ದಕ್ಷಿಣ ಭಾರತದ ಉದ್ದಿಮೆದಾರರು, ಪರಿಣಿತರು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದೆ. ಕೇಂದ್ರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಬೆಲೆ ಹೆಚ್ಚಳ ಕುರಿತು ಪ್ರಯತ್ನಿಸಲಾಗುವುದು. ಪ್ರತಿ ಕ್ವಿಂಟಾಲ್ ತೊಗರಿಗೆ 8,500 ರೂ. ದರ ನಿಗದಿ ಮಾಡುವಂತೆ ರೈತ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.