ಬಸವಕಲ್ಯಾಣ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೋರ ವಲಯದಲ್ಲಿರುವ ಬಸವ ಮಹಾಮನೆ ಪರಿಸರ ಸಮೀಪ ನಡೆದಿದೆ.
ಜೀವನದಲ್ಲಿ ಜಿಗುಪ್ಸೆ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ - Basavakalyan
ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವ ಮಹಾಮನೆ ಪರಿಸರ ಸಮೀಪ ನಡೆದಿದೆ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಕುದಮುಡ ಗ್ರಾಮದ ನಿವಾಸಿ ಶರಣಬಸಪ್ಪ ಕಂಟೆಪ್ಪ ಬಿರಾದಾರ(33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿ ಜೊತೆ ಮಹಾರಾಷ್ಟ್ರದ ಪೂನಾ ನಗರದಲ್ಲಿ ವಾಸುತಿದ್ದ ಈತ ಭಾನುವಾರ ಮಧ್ಯಾಹ್ನ ಪತ್ನಿಯನ್ನು ಕರೆದುಕೊಂಡು ಪೂನಾದಿಂದ ಹುಮನಾಬಾದ್ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ಗ್ರಾಮಕ್ಕೆ ತೆರಳುವಂತೆ ಪತ್ನಿಗೆ ಸೂಚಿಸಿ, ಈತ ಬಸವಕಲ್ಯಾಣ ಕಡೆಗೆ ಪ್ರಯಾಣ ಬೆಳೆಸಿದ್ದಾನೆ. ಸಂಜೆ 5ರ ಸುಮಾರಿಗೆ ತನ್ನ ಕಿರಿಯ ಸಹೋದರನಿಗೆ ಮೊಬೈಲ್ ಮೂಲಕ ಕರೆ ಮಾಡಿ ತಾನು 108 ಅಡಿ ಎತ್ತರದ ಬಸವಣ್ಣ ಪುತ್ಥಳಿ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತಿದ್ದೇನೆ. ಮನೆಯಲ್ಲಿ ಯಾರು ಕೂಡ ನನ್ನ ಆಗಮನದ ದಾರಿ ನೋಡಬೇಡಿ ಎಂದು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿ ತಿಳಿದ ಕುಟುಂಬದ ಸದಸ್ಯರು ಭಾನುವಾರ ರಾತ್ರಿಯೇ ಬಸವ ಮಹಾಮನೆ ಪರಿಸರದಲ್ಲಿ ಬಂದು ಈತನಿಗಾಗಿ ಹುಡುಕಾಡಿದ್ದಾರೆ. ಆದರೆ ಕತ್ತಲಾದ ಪರಿಣಾಮ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಮರಕ್ಕೆ ಜೋತು ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಕುಟುಂಬದವರು ನೀಡಿದ ದೂರಿನ ಮೇಲೆ ಇಲ್ಲಿಯ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಸುನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.