ಬಸವಕಲ್ಯಾಣ (ಬೀದರ್):ಬಿಜೆಪಿ ನಾಯಕರು ಉಳಿದುಕೊಂಡಿರುವ ನಿವಾಸದಲ್ಲಿ ಮತದಾರರಿಗೆ ಹಂಚಲು ಹಣ ತಂದಿಡಲಾಗಿದೆ. ಹೀಗಾಗಿ, ಆ ನಿವಾಸದ ತಪಾಪಣೆ ನಡೆಸಬೇಕೆಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿದ ಪ್ರಸಂಗ ಬುಧವಾರ ರಾತ್ರಿ ಜರುಗಿತು.
ಈ ವೇಳೆ ಸ್ಥಳಕ್ಕಾಗಮಿಸಿದ ವಸತಿ ಸಚಿವ ವಿ.ಸೋಮಣ್ಣ, ಇಲ್ಲಿ ಅಂತಹದ್ದು ಏನೂ ಇಲ್ಲ. ನೀನು ಕೂಡ ನಮ್ಮ ಹುಡುಗನೇ ಆಗಿದ್ದಿಯಾ, ಅನವಶ್ಯಕವಾಗಿ ಕಿರಿಕಿರಿ ಮಾಡಬೇಡ ಎಂದು ಖೂಬಾಗೆ ಸೂಚಿಸಿದರು. ಆದರೆ, ಪಟ್ಟು ಹಿಡಿದು ಖೂಬಾ ಸ್ಥಳದಲ್ಲಿಯೇ ನಿಂತರು. ಬಳಿಕ ಅಲ್ಲಿದ್ದ ಸಿಪಿಐ ವೀರಾರೆಡ್ಡಿ ಹಾಗೂ ಪೊಲೀಸ್ ಅಧಿಕಾರಿಗಳು ನಿಮಗೆ ಸಂಶಯವಿದ್ದರೆ ಸಂಬಂಧಪಟ್ಟ ಚುನಾವಣಾ ಆಯೋಗಕ್ಕೆ ದೂರು ನೀಡಿ. ಆದರೆ, ಈ ರೀತಿಯಲ್ಲಿ ಬಂದು ಕಿರಿಕಿರಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿ ಖೂಬಾ ಹಾಗೂ ಅವರ ಬೆಂಬಲಿಗರನ್ನು ಸ್ಥಳದಿಂದ ಕಳಿಸಿದರು.