ಬಸವಕಲ್ಯಾಣ (ಬೀದರ್): ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಂಬಂಧ ದೇಶದಾದ್ಯಂತ ಜಾರಿಗೊಳಿಸಲಾದ ಲಾಕ್ ಡೌನ್‌ನಿಂದಾಗಿ ಲಾರಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಲಾರಿಗಳ ತವರೂರು ಎಂದೇ ಪ್ರಖ್ಯಾತಿ ಹೊಂದಿರುವ ಬಸವಕಲ್ಯಾಣದಲ್ಲಿ ಸಾವಿರಾರು ಲಾರಿಗಳು ಕೆಲಸವಿಲ್ಲದೆ ಎಲ್ಲೆಂದರಲ್ಲಿ ನಿಂತಿದ್ದು, ಲಾರಿ ಉದ್ಯಮ ನಷ್ಟದ ಸುಳಿಗೆ ಸಿಲುಕಿ ಒದ್ದಾಡುವಂತೆ ಮಾಡಿದೆ.
ಸುಮಾರು 6 ಸಾವಿರಕ್ಕೂ ಅಧಿಕ ಸರಕು ಸಾಗಾಣಿಕೆ ಲಾರಿಗಳನ್ನು ಹೊಂದಿರುವ ಬಸವಕಲ್ಯಾಣ ನಗರ ರಾಜ್ಯದಲ್ಲಿಯೇ ಅಧಿಕ ಲಾರಿ ಹೊಂದಿದ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಲಾಕ್‌ಡೌನ್‌ನಿಂದಾಗಿ ಲಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಪ್ರತಿ ನಿತ್ಯ ಸುಮಾರು 1 ಕೊಟಿಗೂ ಅಧಿಕ ನಷ್ಟ ಅನುಭವಿಸುತ್ತಿದೆ.
ನಷ್ಟದ ಸುಳಿಯಲ್ಲಿ ಲಾರಿ ಉದ್ಯಮ ಲಾರಿ ಉದ್ಯಮದಿಂದ ಇಲ್ಲಿಯ ಸಸ್ತಾಪೂರ ಬಂಗ್ಲಾ ಬಳಿ ನಿರ್ಮಾಣಗೊಂಡಿರುವ ಆಟೋ ನಗರದಲ್ಲಿ ಸುಮಾರು 5 ನೂರಕ್ಕೂ ಅಧಿಕ ಲಾರಿ ಗ್ಯಾರೇಜ್‌ಗಳು, ಬಿಡಿ ಭಾಗ ಮಾರಾಟದ ಅಂಗಡಿಗಳು ಇದ್ದು, ಕೆಲಸವಿಲ್ಲದ ಕಾರಣ ಇಲ್ಲಿಯ ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಬೀಗ ಹಾಕಲಾಗಿದೆ.
ಲಾರಿಗಳ ಗ್ಯಾರೇಜ್ ಸೇರಿದಂತೆ ಬಿಡಿ ಭಾಗಗಳ ಮಾರಾಟದ ಅಂಗಡಿಗಳಲ್ಲಿ ದುಡಿಯುತಿದ್ದ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ದುಡಿಮೆಯಿಂದ ಬರುವ ಆದಾಯದಿಂದಲೇ ಕುಟುಂಬ ನಿರ್ವಹಣೆ ನಡೆಸುವ ಕಾರ್ಮಿಕರ ಹಾಗೂ ಲಾರಿ ಚಾಲಕ ಮತ್ತು ಕ್ಲೀನಲ್ಗಳ ಕುಟುಂಬಗಳು ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.
ಲಾರಿಗಲಲ್ಲಿ ಕೆಲಸ ಮಾಡಲೆಂದು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧಡೆಯಿಂದ ಇಲ್ಲಿಗೆ ಆಗಮಿಸಿದ ಚಾಲಕರು ಮತ್ತು ಕ್ಲಿನರ್‌ಗಳು ಸಾರಿಗೆ ಸಂಚಾರ ಸ್ಥಗಿತಗೊಂಡ ಕಾರಣ ಅತ್ತ ಊರಿಗೂ ತೆರಳಲಾಗದೆ, ಇತ್ತ ಇಲ್ಲೂ ಇರಲಾಗದೆ ಒದ್ದಾಡುವಂತಾಗಿದೆ.
ಇಲ್ಲಿ ಲಾರಿ ಖರಿದಿಸಿದ ಬಹುತೇಕರು ಫೈನಾನ್ಸ್ಗಳಲ್ಲಿ ಸಾಲ, ಸೂಲ ಮಾಡಿಯೇ ಲಾರಿ ಖರೀದಿಸಿದ್ದಾರೆ. 60ರಿಂದ 70ಸಾವಿರ ರೂ.ಗಳಷ್ಟು ಮಾಸಿಕ ಕಂತು ಕಟ್ಟಬೇಕಾಗುತ್ತದೆ. ಲಾರಿಗಳಿಂದ ಆದಾಯ ಬರದಿದ್ದರು ಸಹಿಸಿಕೊಳ್ಳಬಹುದು, ಆದರೆ ಫೈನಾನ್ಸ್ಗಳಿಗೆ ಮಾಸಿಕವಾಗಿ ಕಟ್ಟಬೇಕಾದ ಹಣ ಎಲ್ಲಿಂದ ತರಬೇಕು ಎನ್ನುವುದು ಚಿಂತೆಯಾಗಿದೆ. ಇನ್ನಷ್ಟು ದಿನಗಳ ಕಾಲ ಇದೆ ಸ್ಥಿತಿ ಮುಂದುವರೆದಲ್ಲಿ ನೂರಾರು ಕೋಟಿ ನಷ್ಟ ಎದುರಿಸಬೇಕಾಗುತ್ತದೆ ಎಂದು ಇಲ್ಲಿಯ ಲಾರಿಗಳ ಮಾಲೀಕರು ಆತಂಕ ವ್ಯಕ್ತಪಡಿಸುತಿದ್ದಾರೆ.