ಬೀದರ್:ಲಾಕ್ಡೌನ್ ಹಿನ್ನೆಲೆ ಸರಿಯಾದ ಮಾರುಕಟ್ಟೆ ಇಲ್ಲದ ಕಾರಣ ಸೌತೆಕಾಯಿ ಬೆಳೆದಿದ್ದ ರೈತ ಮಹಿಳೆ ಬೆಳೆಯನ್ನು ಜಾನುವಾರುಗಳ ಪಾಲು ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಲಾಕ್ಡೌನ್ ನಿಂದಾಗಿ ಬೆಳೆದ ಬೆಳೆ ಜಾನುವಾರುಗಳ ಪಾಲು: ಕಂಗಾಲಾದ ಅನ್ನದಾತೆ...! ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಶೋಭಾವತಿ ಬಿರಾದಾರ ಎಂಬ ರೈತ ಮಹಿಳೆಯ ತನ್ನ ಎರಡು ಎಕರೆ ಜಮಿನಿನಲ್ಲಿ 50ಸಾವಿರ ರೂಪಾಯಿ ಕೈ ಸಾಲ ಮಾಡಿಕೊಂಡು ಬೇಸಿಗೆ ಕಾಲದ ಬಹು ಬೇಡಿಕೆಯ ಬೆಳೆಯಾದ ಸೌತೆಕಾಯಿ ಬೆಳೆ ಬೆಳೆದಿದ್ದರು. ಸುಮಾರು ಎರಡು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ಇವರಿಗೆ ಲಾಕ್ ಡೌನ್ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕೆ.ಜಿ. ಸೌತೆಕಾಯಿಗೆ 30 ರೂಪಾಯಿ ಇದ್ದ ಬೆಲೆ ದಿಢೀರನೆ ಕೇವಲ 4 ರಿಂದ ರೂಪಾಯಿಗೆ ಕುಸಿದಿದೆ. ಲಾಭವಿರಲಿ ಎಂದು ಹಾಕಿದ ದುಡ್ಡು ವಾಪಸ್ ಸಿಗಲಿಲ್ಲ ಎಂದು ಶೋಭಾವತಿ ನಿರಾಸೆಯಾಗಿದ್ದಾರೆ.
ಗಂಡನಿಲ್ಲದೆ ಎರಡು ಮಕ್ಕಳೊಂದಿಗೆ ಬೇಸಾಯ ಮಾಡಿಕೊಂಡು ಹೇಗೋ ಜೀವನ ಸಾಗಿಸುವ ಛಲ ಹೊಂದಿರುವ ಮಹಿಳೆಗೆ ಲಾಕ್ಡೌನ್ನಿಂದಾಗಿ ಆಗಿರುವ ಆಘಾತ ಗಾಯದ ಮೇಲೆ ಬರೆ ಎಳೆದಿದೆ. ಹೀಗಾಗಿ ಸರ್ಕಾರ ನಷ್ಟ ಭರಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು ಎಂದು ಶೋಭಾವತಿ ಕೇಳಿಕೊಂಡಿದ್ದಾರೆ.